ಪ. ಜಾತಿ, ಪಂಗಡದ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ
ಉಡುಪಿ, ಆ.21: ಉಡುಪಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಜಿಲ್ಲಾ ದಲಿತ ಮಹಿಳಾ ಒಕ್ಕೂಟ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಇವುಗಳ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಒಂದು ದಿನದ ಕೌಶಲ್ಯಾಭಿವೃದ್ಧಿ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರವೊಂದು ಆ.24ರಂದು ಸೋಮವಾರ ಆದಿ ಉಡುಪಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಕಾರ್ಯಾಗಾರದಲ್ಲಿ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ವಿವಿಧ ನಿಗಮಗಳಿಂದ ಮಹಿಳೆಯರಿಗೆ ಸಿಗುವ ಸಬ್ಸಿಡಿ ಸಾಲ ಯೋಜನೆಗಳ ಮಾಹಿತಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಿಗುವ ಸಾಲವನ್ನು ಪಡೆಯುವ ಬಗ್ಗೆ ಮಾರ್ಗದರ್ಶನವನ್ನೂ ಬೆಳಗ್ಗೆ 10:30ರಿಂದ ನೀಡಲಾಗುತ್ತದೆ.
ಕಾರ್ಯಾಗಾರವನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಲಿದ್ದಾರೆ. ದಲಿತ ಮಹಿಳಾ ಒಕ್ಕೂಟ ರಾಜ್ಯ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅನಿತಾ ಮಡ್ಲೂರು ಭಾಗವಹಿಸಲಿದ್ದಾರೆ.
ಕಾರ್ಯಾಗಾರದಲ್ಲಿ ಮಾಹಿತಿ ಸಂಪನ್ಮೂಲ ವ್ಯಕ್ತಿಗಳಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾದ ಶಂಕರ ಮಲ್ಲಾರ್, ಉಡುಪಿ ಕಾವೇರಿ ನ್ಯಾಚುರಲ್ಸ್‌ನ ಪ್ರಮೀಳಾ ಬಾರ್ಕೂರು ಮತ್ತು ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಆದ ಹರೀಶ್ ಜಿ. ಭಾಗವಹಿಸಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳಿಂದ ಸಿಗುವ ವಿವಿಧ ಯೋಜನೆಗಳು, ಸವಲತ್ತುಗಳು ಹಾಗೂ ವಿದ್ಯಾರ್ಥಿಗಳಿಗೆ ಸಿಗುವ ವಿವಿಧ ಸ್ಕಾಲರ್‌ಶಿಪ್‌ಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಮಾಜಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಗುಜ್ಜರಬೆಟ್ಟು ಉಪಸ್ಥಿತರಿರುವರು.
ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆ ಯರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮಹಿಳಾ ಒಕ್ಕೂಟ ಮನವಿ ಮಾಡಿದೆ.