ಕುಂದಾಪುರ| ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿಗೆ ಸರಕಾರಿ ವೈದ್ಯನಿಂದ ಹಲ್ಲೆ ಆರೋಪ: ಪ್ರಕರಣ ದಾಖಲು

Update: 2026-08-21 17:50 IST

ಉಡುಪಿ, ಆ.21: ಕನ್ನಡ ಪ್ರಭ ಕುಂದಾಪುರ ಹಾಗೂ ಬೈಂದೂರು ತಾಲೂಕು ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸರಕಾರಿ ವೈದ್ಯಾಧಿಕಾರಿ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಏಕಾಏಕಿ ಹಲ್ಲೆ ನಡೆಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಸರಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ವೈದ್ಯರು ಬಡರೋಗಿಗಳಿಂದ ಚಿಕಿತ್ಸೆಯ ವೇಳೆ ಹಣ ಪಡೆಯುತ್ತಿರುವ ಬಗ್ಗೆ ಶ್ರೀಕಾಂತ್ ಹೆಮ್ಮಾಡಿ ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಇದೇ ವಿಚಾರದಲ್ಲಿ ದ್ವೇಷಗೊಂಡ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ಆ.21ರಂದು ಬೆಳಗ್ಗೆ ಕುಂದಾಪುರ ಹೊಟೇಲ್‌ನಲ್ಲಿ ಶ್ರೀಕಾಂತ್ ಹೆಮ್ಮಾಡಿ ತನ್ನ ಪತ್ನಿ ಹಾಗೂ ಸಹಪಾಠಿ ಜೊತೆ ಉಪಹಾರ ಸೇವಿಸುತ್ತಿದ್ದು, ಈ ವೇಳೆ ಅಲ್ಲಿಗೆ ಬಂದ ಡಾ.ಮಹೇಂದ್ರ ಕುಮಾರ್ ಶೆಟ್ಟಿ, ಶ್ರೀಕಾಂತ್ ಹೆಮ್ಮಾಡಿ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವ್ಯಾಪಾಕ ಖಂಡನೆ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬ್ರಹ್ಮಾವರ, ಬೈಂದೂರು, ಕಾಪು, ಕುಂದಾಪುರ, ಹೆಬ್ರಿ, ಕಾರ್ಕಳ ತಾಲೂಕು ಘಟಕಗಳು ತೀವ್ರವಾಗಿ ಖಂಡಿಸಿವೆ.

ಅದೇ ರೀತಿ ಈ ಹಲ್ಲೆಯನ್ನು ಸಹಬಾಳ್ವೆ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಪ್ರೊ.ಫಣಿರಾಜ್, ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಹಾಗೂ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಸಂತೋಷ ಬಜಾಲ್ ತೀವ್ರವಾಗಿ ಖಂಡಿಸಿ, ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News