ಪಿಂಚಣಿ ಆದಾಯ ಮಿತಿ 1.20 ಲಕ್ಷ ರೂ.ಗೆ ಏರಿಕೆ; ಅಭಿನಂದನೆ
ಉಡುಪಿ, ಆ.21: ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುವ ಫಲಾನುಭವಿಗಳ ಆದಾಯ ಮಿತಿಯನ್ನು 32,000ರೂ.ಗಳಿಂದ 1.20ಲಕ್ಷ ರೂ.ಗಳಿಗೆ ಹೆಚ್ಚಿಸಿರುವ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿದ್ದು, ಇದಕ್ಕಾಗಿ ರಾಜ್ಯ ಸರಕಾರವನ್ನು ಅಭಿನಂದಿಸಿದ್ದಾರೆ.
ಅಸಹಾಯಕರು, ಅಶಕ್ತರು, ವಿಧವೆಯರು ಮತ್ತು ಅಂಗವಿಕಲರಿಗೆ ಕಂದಾಯ ಇಲಾಖೆಯ ಮೂಲಕ ರಾಜ್ಯ ಸರಕಾರ ಹಲವು ಸಾಮಾಜಿಕ ಭದ್ರತಾ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ ಪಿಂಚಣಿ ಯೋಜನೆ, ವಿಕಲಾಂಗ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಎಗ ಇದರಿಂದ ಅನುಕೂಲ ವಾಗಲಿದೆ ಎಂದು ಹರೀಶ್ ಕಿಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಒಂದು ಬಾರಿ ಸೌಲಭ್ಯ ಸಿಗುವ ಯೋಜನೆಗಳಾದ ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯ ಸಂಸ್ಕಾರ ಸಹಾಯ ಯೋಜನೆಗಳ ಆದಾಯ ಮಿತಿಯನ್ನು 32,000ದಿಂದ 1 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿ ದನ್ನೂ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿದ್ದಾರೆ.
ಕಳೆದ ಹಲವು ತಿಂಗಳಿನಿಂದ ಫಲಾನುಭವಿಗಳ ಪರಿಶೀಲನೆಯನ್ನು ಇಲಾಖೆ ನಡೆಸುತ್ತಿದ್ದು ಇದರಿಂದ ಬಹಳಷ್ಟು ಮಂದಿ ಫಲಾನುಭವಿಗಳು ತೊಂದರೆ ಗೊಳಗಾಗಿದ್ದರು. ಪರಿಶೀಲನೆಯನ್ನು ಶೀಘ್ರವಾಗಿ ನಡೆಸಿ 1.20 ಲಕ್ಷದೊಳ ಗಿನ ವಾರ್ಷಿಕ ಮಿತಿಯ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಕೂಡಲೇ ದೊರೆಯುವಂತೆ ಮಾಡಬೇಕು ಎಂದು ಕಂದಾಯ ಸಚಿವ ಜಿ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ ಕೇಂದ್ರ ಸರಕಾರದ ಸೂಚನೆಯಂತೆ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆಯೂ ನಡೆಯುತ್ತಿದೆ. ಈಗಾಗಲೇ ಹಲವು ಕಾರ್ಡ್‌ಗಳು ರದ್ದಾಗಿವೆ. ಇದರ ಮಾನದಂಡಗಳನ್ನು ಮರು ಪರಿಶೀಲನೆ ನಡೆಸಿ ಈಗಿರುವ ಆದಾಯ ಮಿತಿಯನ್ನು ಹೆಚ್ಚಿಸಬೇಕೆಂದು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ಹರೀಶ ಕಿಣಿ ಒತ್ತಾಯಿಸಿದ್ದಾರೆ.