ವೈಜ್ಞಾನಿಕ ಕ್ರಮದಲ್ಲಿ ಕೃಷಿ ಪದ್ದತಿ ಅಗತ್ಯ: ಭೂಮಿಕಾ

Update: 2026-08-22 18:38 IST

ಶಿರ್ವ, ಆ.22: ಕರಾವಳಿ ಭಾಗದಲ್ಲಿ ಶಂಕರಪುರ ಮಲ್ಲಿಗೆ, ಮಂಗಳೂರು, ಕುಂದಾಪುರ, ಭಟ್ಕಳ ಮಲ್ಲಿಗೆ ಪ್ರಸಿದ್ಧವಾಗಿದ್ದು, ಸ್ಥಳದಿಂದ ಸ್ಥಳಕ್ಕೆ ಅದರ ಪರಿಮಳ, ಇಳುವರಿಯಲ್ಲಿ ವೈಧ್ಯತೆಗಳಿವೆ. ಪರಿಸರಕ್ಕೆ ಹೊಂದಿಕೊಂಡು ಆಯಾ ಪ್ರದೇಶಕ್ಕೆ ಅನುಗುಣವಾಗಿ ವೈಜ್ಞಾನಿಕ ಕ್ರಮದಲ್ಲಿ ಕೃಷಿ ಪದ್ದತಿ, ಗೊಬ್ಬರದ ಬಳಕೆ, ನಿರ್ವಹಣೆ, ರೋಗಾಣು ಗಳ ನಿಯಂತ್ರಣ, ಮಳೆ, ಬೇಸಿಗೆ, ಚಳಿಗಾಲದಲ್ಲಿ ಕೃಷಿಕರು ಗಮನಿಸಬೇಕು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಭೂಮಿಕಾ ಎಚ್.ಆರ್. ಹೇಳಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉಡುಪಿ, ರೈತ ಸಂಪರ್ಕ ಕೇಂದ್ರ ಕಾಪು, ವಳದೂರು ವೆಲ್ಫೇರ್ ಅಸೋಸಿಯೇಶನ್ಸ್ ವಲದೂರು ಇದರ ಸಹಭಾಗಿತ್ವದಲ್ಲಿ ಪಂಜಿಮಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಬುಧವಾರ ಜರುಗಿದ ಮಲ್ಲಿಗೆ ಕೃಷಿ, ಅಡಿಕೆ ಹಾಗೂ ಭತ್ತದ ಕೃಷಿ ಕುರಿತ ಮಾಹಿತಿ ಕಾಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.

ಕಾಯಾಗಾರವನ್ನು ಉದ್ಘಾಟಿಸಿದ ನಿವೃತ್ತ ಶಿಕ್ಷಕ, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ನಮ್ಮ ಹಿರಿಯರು ಕಠಿಣ ಶ್ರಮಜೀವಿಗಳಾಗಿದ್ದು ಕೃಷಿಯೇ ಜೀವನಾಧಾರವಾಗಿತ್ತು. ವಿವಿಧ ಕಾರಣ ಗಳಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ. ಈಗ ಆಧುನಿಕ ಕಾಲಘಟ್ಟದಲ್ಲಿ ಯಂತ್ರೋಪಕರಣಗಳ ಬಳಕೆ, ವಿವಿಧ ರಸಗೊಬ್ಬರಗಳು, ಕೃಷಿ ಇಲಾಖೆುಂದ ಉಚಿತವಾಗಿ ಸಕಾಲಿಕ ಮಾಹಿತಿ ಹಾಗೂ ಪ್ರೋತ್ಸಾಹ ಸಿಗುತ್ತಿದ್ದು ಅದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು. ಕಡಿಮೆ ಶ್ರಮ, ಅಧಿಕ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿ ಪೂರಕವಾಗಿದೆ ಎಂದರು.

ಪ್ರಗತಿಪರ ರೈತ ನಿತ್ಯಾನಂದ ನಾಯಕ್ ಪಾಲಮೆ ಪಾದೂರು, ಸಾವಯವ ಭತ್ತದ ಬೆಳೆಯ ಬಗ್ಗೆ ಮಾಹಿತಿ ನೀಡಿ, ಜೀವಾಮೃತ ಸಿದ್ಧ ಪಡಿಸುವುದು, ಬಳಕೆ, ಹಸಿರೆಲೆ ಗೊಬ್ಬರ, ಸೆಣಬು, ಡಯಾಂಚ ಗೊಬ್ಬರ, ಗದ್ದೆ ಹದಗೊಳಿಸುವ ಕ್ರಮದ ಬಗ್ಗೆ ತಿಳಿಸಿ, ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಹಿರಿಯ ಕೃಷಿಕರಾದ ಗೋಪಾಲ ರಾವ್ ಪಾಲಮೆ, ಸೆವ್ರಿನ್ ಕಸ್ತಲಿನೊ ವಲದೂರು ಅವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಪೂಜಾರಿ ವಲದೂರು ಸನ್ಮಾನಿತರನ್ನು ಪರಿಚಯ ಮಾಡಿದರು.

ಅಧ್ಯಕ್ಷತೆಯನ್ನು ಸಂಘದ ಮಾಜಿ ಅಧ್ಯಕ್ಷೆ ಹರೀಣಾಕ್ಷಿ ಶೆಟ್ಟಿ ವಹಿಸಿದ್ದರು. ವಲದೂರು ವೆಲ್ಫೇರ್ ಎಸೋಸಿಯೇಶನ್ ಕಾರ್ಯದರ್ಶಿ ಅಜಿತ್ ಪೂಜಾರಿ, ಕೃಷಿ ಸಖಿ ಪ್ರಜ್ಞಾ ವೇದಿಕೆಯಲ್ಲಿದ್ದರು. ಕಾಪು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪುಷ್ಪಲತಾ ಪ್ರಾಸ್ತಾಕ ಮಾತುಗಳೊಂದಿಗೆ ಸ್ವಾಗತಿಸಿ ವಂದಿಸಿದರು. ಬಳಿಕ ಕೃಷಿ ಕೇಂದ್ರದಿಂದ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News