ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ಬೀದಿ ನಾಟಕ
ಉಡುಪಿ, ಆ.22: ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರದ ಪದವಿ ವಿದ್ಯಾರ್ಥಿಗಳು, ಕುಮಾರಭೃತ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ 2026ರ ಅಂಗವಾಗಿ ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಬೀದಿ ನಾಟಕವನ್ನು ಕೇಂದ್ರದ ಆವರಣದಲ್ಲಿ ಆ.12ರಂದು ಪ್ರದರ್ಶಿಸಲಾಯಿತು.
ಮಗುವಿನ ಬೆಳವಣಿಗೆ, ವಿಕಾಸ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವಲ್ಲಿ ಸ್ತನ್ಯಪಾನದ ಮಹತ್ವವನ್ನು ವಿವರಿಸಿ, ಸೂಕ್ತ ಶಿಶು ಆಹಾರ ಪದ್ಧತಿಗಳನ್ನು ಅನುಸರಿಸಲು ಪ್ರೋತ್ಸಾಹಿಸಲಾಯಿತು. ಮೊದಲ ಆರು ತಿಂಗಳವರೆಗೆ ಕೇವಲ ತಾಯಿಯ ಹಾಲನ್ನೇ ನೀಡುವುದರ ಮಹತ್ವವನ್ನು ಬೀದಿ ನಾಟಕದ ಮೂಲಕ ವಿವರಿಸಲಾಯಿತು. ಸ್ತನ್ಯಪಾನ ಸಾಧ್ಯವಿರುವ ಸಂದರ್ಭಗಳಲ್ಲಿ ಫಾರ್ಮುಲಾ ಹಾಲನ್ನು ಅನಗತ್ಯವಾಗಿ ಬಳಸಬಾರದು ಎಂಬುದನ್ನು ತಿಳಿಸಲಾಯಿತು.
ಬೀದಿ ನಾಟಕದಲ್ಲಿ, ಮಗುವಿಗೆ ಹಾಲುಣಿಸುವಾಗ ಸರಿಯಾದ ದೇಹದ ಸ್ಥಿತಿ, ಮಗುವನ್ನು ಸರಿಯಾಗಿ ಹಿಡಿಯುವ ವಿಧಾನ ಮತ್ತು ಸರಿಯಾದ ರೀತಿಯಲ್ಲಿ ಹಾಲನ್ನು ಹೀರುವ ವಿಧಾನ ಸೇರಿದಂತೆ ಸೂಕ್ತ ಸ್ತನ್ಯಪಾನ ವಿಧಿಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಲಾಯಿತು. ಪರಿಣಾಮಕಾರಿ ಹಾಲುಣಿಸುವಿಕೆ ಮತ್ತು ತಾಯಿಯ ವಿಶ್ರಾಮಕ್ಕಾಗಿ ಸರಿಯಾದ ಕ್ರಮಗಳ ಮಹತ್ವವನ್ನೂ ವಿವರಿಸಲಾಯಿತು.
ಪ್ರಾಂಶುಪಾಲೆ ಡಾ.ಮಮತಾ ಕೆ.ವಿ., ಕುಮಾರಭೃತ್ಯ ವಿಭಾಗದ ಮುಖ್ಯಸ್ಥ ಡಾ.ಪೃಥ್ವಿರಾಜ್ ಪುರಾಣಿಕ್ ಉಪಸ್ಥಿತರಿ ದ್ದರು. ಕಾರ್ಯಕ್ರಮ ಸಂಯೋಜಕಿ ಡಾ.ಸಹನಾ ಶಂಕರಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಚಿತ್ರಲೇಖಾ, ಡಾ.ಕಾವ್ಯ, ಡಾ.ಪ್ರಿಯಾಂಕಾ ವೈ. ಸಹಕರಿಸಿದರು. ಆಸ್ಪತ್ರೆಯ ವೈದ್ಯರು, ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿ ಗಳು, ತಾಯಂದಿರು, ಗರ್ಭಿಣಿ ಯರು ನರ್ಸ್, ಸಿಬ್ಬಂದಿ ಭಾಗವಹಿಸಿದ್ದರು.