ಉಡುಪಿ, ಆ.25: ಪ್ರವಾದಿ ಮುಹಮ್ಮದ್(ಸ.ಅ.) ಪೈಗಂಬರ್ ರವರ ಜನ್ಮ ದಿನಾಚರಣೆ ಮೀಲಾದುನ್ನಬಿಯನ್ನು ಶುಕ್ರವಾರ ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಉಡುಪಿ ಹೊರವಲಯದ ನೇಜಾರು, ದೊಡ್ಡಣಗುಡ್ಡೆ, ಸಂತೋಷ್ ನಗರ, ತೋನ್ಸೆ ಹೂಡೆ, ಕಾಪು ತಾಲೂಕಿನ ಪೊಲಿಪು, ಕಟಪಾಡಿ, ಉಚ್ಚಿಲ, ಮೂಳೂರು, ಪಡುಬಿದ್ರೆ, ಕಾರ್ಕಳ, ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾಣ, ಪಾರಂಪಳ್ಳಿ, ಕೋಟತಟ್ಟು, ಕುಂದಾಪುರ ಕೋಡಿ, ಬೈಂದೂರು, ಶಿರೂರು, ನಾವುಂದ ಸೇರಿದಂತೆ ಹಲವೆಡೆ ಮೀಲಾದ್ ಮೆರವಣಿಗೆ ವಿಜೃಂಭಣೆ ಯಿಂದ ಜರಗಿದವು.

ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ವಾಪಾಸ್ಸು ಅದೇ ಮಸೀದಿಗಳಿಗೆ ಆಗಮಿಸುವ ಮೂಲಕ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಪ್ರವಾದಿ ಸಂದೇಶ, ದಫ್ ಕುಣಿತ, ಸ್ಕೌಟ್ ಹಾಗೂ ಮದ್ರಸದ ಮಕ್ಕಳು ಸಾಗಿಬಂದರು.

ಉಡುಪಿ ತಾಲೂಕು: ದೊಡ್ಡಣಗುಡ್ಡೆ ಜುಮಾ ಮಸೀದಿಯಿಂದ ಹೊರಟ ಸಂದಲ್ ಮೆರವಣಿಗೆಯು ಬುದಗಿ ಸ್ಟೋರ್‌ವರೆಗೆ ಸಾಗಿ, ಬಳಿಕ ವಾಪಾಸ್ಸು ಮಸೀದಿಗೆ ಮರಳಿ ಸಮಾಪ್ತಿಗೊಂಡಿತು. ಇದರಲ್ಲಿ ಮಕ್ಕಳ ಸ್ಕೌಟ್ಸ್ ಹಾಗೂ ದಾಯಿರ ಆಕರ್ಷಣೀಯವಾಗಿತ್ತು.

ಅದೇ ರೀತಿ ಸಂತೋಷ್‌ನಗರ ಮಸೀದಿಯಲ್ಲೂ ಮಿಲಾದುನ್ನಬಿ ರ್ಯಾಲಿ ಜರಗಿತು. ಮಸೀದಿಯಿಂದ ಹೊರಟ ಮೆರವಣಿಗೆಯು ಅಂಬಾಗಿಲುವರೆಗೆ ಸಾಗಿ ವಾಪಾಸ್ಸು ಮಸೀದಿಗೆ ಆಗಮಿಸಿತು.

ನೇಜಾರು ಜುಮಾ ಮಸೀದಿಯ ವತಿಯಿಂದ ವೈಭವದ ಮೆರವಣಿಗೆ ಜರಗಿತು. ಮಸೀದಿಯಿಂದ ಹೊರಟ ರ್ಯಾಲಿಯು ಸಂತೆಕಟ್ಟೆಗೆ ತೆರಳಿ, ಅಲ್ಲಿಂದ ಕಲ್ಯಾಣಪುರ, ನಿಡಂಬಳ್ಳಿ ರಸ್ತೆಯ ಮೂಲಕ ಸುಮಾರು ಐದು ಕಿ.ಮೀ. ದೂರ ಸಾಗಿ ನೇಜಾರು ಮಸೀದಿಗೆ ತಲುಪಿತು.

ಕಾಪು ತಾಲೂಕು: ಕಾಪು ಪೊಲಿಪು ಜುಮಾ ಮಸೀದಿಯಿಂದ ಹೊರಟ ಮೆರವಣಿಗೆಯು ಕೊಪ್ಪಲಂಗಡಿಯವರೆಗೆ ಸಾಗಿ, ಬಳಿಕ ಮಜೂರು, ಮಲ್ಲಾರ್, ಪಕೀರನಕಟ್ಟೆ, ಕೊಪ್ಪಲಂಗಡಿ ಮಸೀದಿಗಳಿಂದ ಆಗಮಿಸಿದ ಮೆರವಣಿಗೆ ಜೊತೆ ವಾಪಾಸ್ಸು ಪೊಲಿಪು ಮಸೀದಿಗೆ ಮರಳಿ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ಕಾಪು ಖಾಝಿ ಅಲ್‌ಹಾಜ್ ಪಿ.ಬಿ.ಅಹ್ಮದ್ ಮುಸ್ಲಿಯಾರ್ ಹಾಜರಿದ್ದರು.

ಮೆರವಣಿಗೆಯಲ್ಲಿ ಆಲಂಕೃತ ವಾಹನಗಳಲ್ಲಿ ದಫ್ ಕುಣಿತ, ತಾಲೀಮು, ಮದ್ರಸ ಮಕ್ಕಳು ಗಮನಸೆಳೆದರು. ಮೆರೆವಣಿಗೆಯ ಉದ್ದಕ್ಕೂ ಸಿಹಿ ತಿಂಡಿ, ತಂಪು ಪಾನೀಯಗಳನ್ನು ನೀಡಲಾಯಿತು. ಪ್ರವಾದಿ ಮುಹಮ್ಮದ್ ಸಂದೇಶದ ಗೀತೆಗಳನ್ನು ಹಾಡಲಾಯಿತು.

ಪಡುಬಿದ್ರಿ ಜಮಾಅತ್ ವತಿಯಿಂದ ನಡೆದ ಮೀಲಾದ್ ರ್ಯಾಲಿ ಕಂಚಿನಡ್ಕ ಜುಮ್ಮಾ ಮಸೀದಿಯಿಂದರ ಹೊರಟು, ರಾಜ್ಯ ಹೆದ್ದಾರಿ ಪಡುಬಿದ್ರಿ ಪೇಟೆ- ಮಾರ್ಕೆಟ್ ರಸ್ತೆಯ ಮೂಲಕ ಪಡುಬಿದ್ರಿ ಜುಮ್ಮಾ ಮಸೀದಿಗೆ ತಲುಪಿತು. ಜಾಥಾದಲ್ಲಿ ಮದರಸ ಮಕ್ಕಳ ಸ್ಕೌಟ್ ಗಮನ ಸೆಳೆಯಿತು. ಕನ್ನಂಗಾರ್ ಜುಮ್ಮಾ ಮಸೀದಿಯ ವತಿಯಿಂದಲೂ ಹೆಜಮಾಡಿ ಯಾದ್ಯಂತ ಜಾಥಾ ಸಂಚರಿಸಿತು. ಭಾರೀ ಸಂಖ್ಯೆಯಲ್ಲಿ ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಮದರಸ ಮಕ್ಕಳ ದಫ್ ಆಕರ್ಷಕವಾಗಿತ್ತು.

ಕುಂದಾಪುರ ತಾಲೂಕು: ಕುಂದಾಪುರ ಕೋಡಿಯ ನಾಲ್ಕು ಮಸೀದಿಗಳಿಗೆ ಸಂಬಂಧಿಸಿದ ಮಿಲಾದ್ ಮೆರವಣಿಗೆ ವಿಜೃಂಭಣೆಯಿಂದ ಜರಗಿತು. ಎಂ ಕೋಡಿಯಿಂದ ಆರಂಭಗೊಂಡ ಮೆರವಣಿಗೆಯು ಸರಕಾರಿ ಆಸ್ಪತ್ರೆವರೆಗೆ ಸಾಗಿ ಬಳಿಕ ವಾಪಾಸ್ಸು ಅದೇ ಮಾರ್ಗದಲ್ಲಿ ಬಂದು ಎಂಕೋಡಿ ಬಿಲಾಲ್ ಮಸೀದಿಯಲ್ಲಿ ಸಮಾಪ್ತಿಗೊಂಡಿತು.

ಮೀಲಾದುನ್ನಬಿ ಪ್ರಯುಕ್ತ ಬಹುತೇಕ ಮಸೀದಿಗಳಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರ್ವಧರ್ಮಿಯರು ಈ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಕೆಲವೆಡೆ ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಮರಿಗೆ ಸ್ಥಳೀಯ ಹಿಂದೂಗಳು ಪಾನೀಯ ಸಿಹಿ ತಿಂಡಿ ವಿತರಿಸಿದರು. ಮೀಲಾದುನ್ನಬಿ ಮೆರವಣಿಗೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮೀಲಾದ್ ರ್ಯಾಲಿಯಲ್ಲಿ ಕೋಮು ಸೌಹಾರ್ದತೆ!

ಉಡುಪಿ ನೇಜಾರು ಮಸೀದಿಯಿಂದ ಹೊರಟ ರ್ಯಾಲಿಯಲ್ಲಿ ಸಾಗಿ ಬಂದ ಮುಸ್ಲಿಮ್ ಬಾಂಧವರಿಗೆ ನೇಜಾರು ಭಜನಾ ಮಂದಿರ, ನೇಜಾರು ಕ್ರೀಡಾಂಗಣ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ಗುರು ಕನ್ಟ್ರಕ್ಷನ್ ಮಾಲಕರಾದ ಚಂದ್ರಶೇಖರ್ ಆಚಾರ್ಯ, ನಾಗೇಶ್ ಆಚಾರ್ಯ, ಚಂದ್ರಶೇಖರ್ ಆಚಾರ್ಯ, ಕೆಳಾರ್ಕಳಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ವತಿಯಿಂದ ತಂಪು ಪಾನೀಯ, ಸಿಹಿತಿಂಡಿಗಳನ್ನು ವಿತರಿಸಿ ಕೋಮು ಸೌಹಾರ್ದತೆ ಮೆರೆದರು.

ಅದೇ ರೀತಿ ಬ್ರಹ್ಮಾವರ ತಾಲೂಕಿನ ಕೋಟತಟ್ಟುವಿನಿಂದ ಕೋಡಿಕನ್ಯಾಣದ ವರೆಗೆ ನಡೆದ ಮೀಲಾದುನ್ನಬಿ ರ್ಯಾಲಿಯಲ್ಲಿ ಸಾಗಿ ಬಂದವರಿಗೆ ರತ್ನಾಕರ ಶ್ರೀಯಾನ್ ನೇತೃತ್ವದಲ್ಲಿ ಹಿಂದು ಬಾಂಧವರು ಸಿಹಿ ಹಂಚಿ ಶುಭಾಯ ಕೋರಿದರು. ಈ ಸಂದರ್ಭದಲ್ಲಿ ಡಾ.ಕೃಷ್ಣ ಕಾಂಚನ್, ರಮೇಶ್ ಮೆಂಡನ್, ದೇವದಾಸ್ ಕಾಂಚನ್, ಅಶೋಕ್ ಬಡಹೊಳಿ ಮೊದಲಾದವರು ಉಪಸ್ಥಿತರಿದ್ದರು. 




 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor