ಉಡುಪಿ, ಆ.25: ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯ ಕೃಷ್ಣ ನಾಯಕ್ ಎಂಬವರ ಮಗ ಆದಿತ್ಯ ನಾಯಕ್(15) ಎಂದು ಗುರುತಿಸಲಾಗಿದೆ. ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ನಡೆಯುತ್ತಿರುವುದರಿಂದ ಆದಿತ್ಯ ತನ್ನ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದನು ಎಂದು ತಿಳಿದುಬಂದಿದೆ.

ಭಜನಾ ಕಾರ್ಯಕ್ರಮದ ಪ್ರಯುಕ್ತ ಭಕ್ತರು ಕೆರೆಯ ನೀರಿಗೆ ಇಳಿದು ಈಜುತ್ತಿದ್ದ ಹಿನ್ನೆಲೆಯಲ್ಲಿ ಆದಿತ್ಯ ಕೂಡ ಕೆರೆಗೆ ಇಳಿದಿದ್ದನು. ಆದರೆ ಆತನೊಂದಿಗೆ ಬಂದಿದ್ದ ಸಂಬಂಧಿಗೆ ಈಜು ಬಾರದ ಕಾರಣ ನೀರಿಗೆ ಇಳಿದಿರಲಿಲ್ಲ. ಕೆರೆಯ ಮಧ್ಯೆ ಈಜುತ್ತಿದ್ದ ಆದಿತ್ಯ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾದನು.

ದೇವಸ್ಥಾನದವರು ಕೂಡಲೇ ಮುಳುಗು ತಜ್ಞ ಈಶ್ವರ ಮಲ್ಪೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಕೆರೆಗೆ ಇಳಿದು ಹುಡುಕಾಟ ನಡೆಸಿದರು. ಸುಮಾರು ತಾಸಿನ ಕಾರ್ಯಾಚರಣೆ ಬಳಿಕ ಆದಿತ್ಯನನ್ನು ಮೇಲಕ್ಕೆತ್ತಲಾಯಿತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆದಿತ್ಯನನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor