ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ: ರಾಜ್ಯಸಭಾ ಸದಸ್ಯ ಡಾ.ಎಂ.ನಾಗರಾಜ್ಗೆ ಮನವಿ
ಉಡುಪಿ, ಆ.25: ಕರಾವಳಿ ಕರ್ನಾಟಕ ಭಾಗಕ್ಕೆ (ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು) ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ ಪೀಠವನ್ನು ತಕ್ಷಣವೇ ಮಂಜೂರು ಮಾಡಬೇಕೆಂದು ಆಗ್ರಹಿಸಿ, ಉಡುಪಿಗೆ ಇಂದು ಭೇಟಿ ನೀಡಿದ ರಾಜ್ಯಸಭಾ ಸದಸ್ಯ ಡಾ.ಎಂ.ನಾಗರಾಜ್ ಅವರಿಗೆ ಯೂ-ಆಕ್ಟ್ ಹಾಗೂ ಕರಾವಳಿ ಕರ್ನಾಟಕ ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ, ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ, ಕರಾವಳಿ ಭಾಗದ ಜನಸಾಮಾನ್ಯರು, ಕಕ್ಷಿದಾರರು ಹಾಗೂ ವಕೀಲರು ನ್ಯಾಯಕ್ಕಾಗಿ 400-450ಕ್ಕೂ ಹೆಚ್ಚು ಕಿಲೋ ಮೀಟರ್ ದೂರದ ಬೆಂಗಳೂರಿಗೆ ಪ್ರಯಾಣಿಸಬೇಕಾಗಿದ್ದು, ವಿಶೇಷವಾಗಿ ಮಳೆಗಾಲದಲ್ಲಿ ಘಾಟಿ ಮಾರ್ಗಗಳ ಸಂಚಾರ ಕಷ್ಟಕರವಾಗಿದ್ದು, ಕಾಲಮಿತಿಯಲ್ಲಿ ಮತ್ತು ಕೈಗೆಟುಕುವ ವೆಚ್ಚದಲ್ಲಿ ನ್ಯಾಯ ಸಿಗಲು ಕರಾವಳಿಯಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಅತ್ಯಗತ್ಯ ಎಂದರು.
ಕರಾವಳಿ ಭಾಗಕ್ಕೆ ಸಂಚಾರಿ ಪೀಠವನ್ನು ಮಂಜೂರು ಮಾಡುವ ಪ್ರಕ್ರಿಯೆಗೆ ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ಗಳು ಶೀಘ್ರ ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರ ಅಗತ್ಯ ಮೂಲಸೌಕರ್ಯ, ಜಾಗ ಮತ್ತು ಆಯವ್ಯಯದ ಬೆಂಬಲ ವನ್ನು ಒದಗಿಸಬೇಕು. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಕಾನೂನು ಸಚಿವಾಲಯವು ಅಗತ್ಯವಿರುವ ಶಾಸನಬದ್ಧ ಮತ್ತು ಆಡಳಿತಾತ್ಮಕ ಅನುಮೋದನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಮನವಿ ಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವಿಜಯ್ ಡಿಸೋಜ, ಸುರೇಶ ಕಾಮತ್, ಪೌರ್ಣಮಿ ಪ್ರೇಮ್, ಸರಿತಾ ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.