ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷ್ಯ ಸಂಗ್ರಹದಿಂದ ಅಪರಾಧಿಗೆ ಶಿಕ್ಷೆ : ಐಜಿಪಿ ಚೇತನ್ ಆರ್
ಉಡುಪಿ, ಸೆ.1: ವಿಜ್ಞಾನ ಇಂದು ಸಾಕಷ್ಟು ವೇಗದಲ್ಲಿ ಬೆಳೆಯುತ್ತಿದೆ. ಹಾಗಾಗಿ ಪೊಲೀಸ್ ಇಲಾಖೆ ವಿಜ್ಞಾನವನ್ನು ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ಪತ್ತೆಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಪ್ರಕರಣದಲ್ಲಿ ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಗೆ ಶಿಕ್ಷೆ ವಿಧಿಸುವಂತೆ ಮಾಡಿ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿಕೊಡುವುದು ಬಹಳ ಮುಖ್ಯವಾಗಿದೆ ಎಂದು ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ ಚೇತನ್ ಆರ್. ಹೇಳಿದ್ದಾರೆ.
ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಆಯೋಜಿಸಲಾದ ಮಂಗಳೂರು ಪಶ್ಚಿಮ ವಲಯ ಮಟ್ಟದ ಎಂಟನೇ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪರಾಧ ಪತ್ತೆ ಹಚ್ಚುವುದು ಪೊಲೀಸರ ಮುಖ್ಯ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ಪೊಲೀಸರು ಶೇ.100 ಶ್ರಮ ವಹಿಸಿದರೆ ಈ ಸಮಾಜ ಶಾಂತಿಯುತವಾಗಿರಲು ಸಾಧ್ಯ. ಇದರಿಂದ ದೇಶ ಪ್ರಗತಿ ಕೂಡ ಸಾಧ್ಯವಾಗುತ್ತದೆ. ಹಾಗಾಗಿ ಪೊಲೀಸ್ ವ್ಯವಸ್ಥೆಯು ರಾಜ್ಯ ಮತ್ತು ದೇಶದ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತದೆ ಎಂದರು.
ಎಲ್ಲಿ ಶಾಂತಿ ನೆಲೆಸಿರುತ್ತದೆಯೋ ಅಲ್ಲಿಗೆ ದೊಡ್ಡ ದೊಡ್ಡ ಉದ್ಯಮ ಬರುತ್ತದೆ. ಇದರಿಂದ ಆ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿಯಾಗುತ್ತದೆ. ಉದ್ಯಮಿಗಳು ಮುಖ್ಯವಾಗಿ ನೋಡುವುದು ಆ ಪ್ರದೇಶದ ಶಾಂತಿಯುತ ವಾಗಿ ಇದೆಯೋ ಇಲ್ಲವೇ ಎಂಬುದು. ಹಾಗಾಗಿ ಪೊಲೀಸ್ ಸಿಬ್ಬಂದಿಯಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಎಲ್ಲರು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಯಾವುದೇ ಕ್ರಿಮಿನಲ್ ಪ್ರಕರಣದಲ್ಲೂ ಸಂತ್ರಸ್ತರಿಗೆ ನ್ಯಾಯ ಸಿಗಬೇಕಾದರೆ ಪ್ರಕರಣಕ್ಕೆ ಸಂಬಂಧಿಸಿ ಸಂಗ್ರಹಿಸಿದ ಪ್ರತಿಯೊಂದು ಸಾಕ್ಷ್ಯಗಳು ಕೂಡ ಮುಖ್ಯವಾಗುತ್ತದೆ. ಅದನ್ನು ಪ್ರಕರಣದೊಂದಿಗೆ ಜೋಡಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಇದರಿಂದ ಆರೋಪಿಗೆ ಶಿಕ್ಷೆ ಸಿಗುವಂತೆ ಮಾಡಲು ಸಾಧ್ಯ. ಪೊಲೀಸ್ ಇಲಾಖೆ ಉದ್ದೇಶ ಅಪರಾಧಿಗೆ ಶಿಕ್ಷೆ ಸಿಗುವಂತೆ ಮಾಡುವುದರ ಜೊತೆ ಬೇರೆಯವರು ಅಪರಾಧ ಎಸಗದಂತೆ ಸಂದೇಶ ನೀಡುವುದಾಗಿದೆ. ಈ ನಿಟ್ಟಿನಲ್ಲಿ ತನಿಖೆಯಲ್ಲಿ ಫಾರೆನ್ಸಿಕ್ ಸೈನ್ಸ್ ಬಹಳ ಮುಖ್ಯವಾಗಿರುತ್ತದೆ ಎಂದರು.
ಮಣಿಪಾಲ ಮಾಹೆಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿದರು. ಮಂಗಳೂರು ವಲಯ ಅಭಿಯೋಜನೆ ಇಲಾಖೆಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಮಂಗಳೂರು ಪ್ರಾದೇಶಿದ ವಿಧಿ ವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕ ಸುಜಾತ ಕೆ.ಎಂ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಂಗಳೂರು ಪಶ್ಚಿಮ ವಲಯದ ಬೆರಳಚ್ಚು ಮುದ್ರೆಯ ಘಟಕದ ಪೊಲೀಸ್ ನಿರೀಕ್ಷಕ ಸೋಮಶೇಖರ್ ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಜಿಲ್ಲೆಗೆ ಸಮಗ್ರ ಪ್ರಶಸ್ತಿ
ಮಂಗಳೂರು ಪಶ್ಚಿಮ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲೆ ಸಮಗ್ರ ಪ್ರಶಸ್ತಿ ಗೆದ್ದಕೊಂಡಿತು.
ಮಂಗಳೂರು ಪಶ್ಚಿಮ ವಲಯ ವ್ಯಾಪ್ತಿಯ ಉಡುಪಿ, ದ.ಕ., ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಮತ್ತು ಪೊಲೀಸ್ ಕಮಿಷನರೇಟರ್ ವಿಭಾಗದ ಪೊಲೀಸರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಒಟ್ಟು 20 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು.