ಮಣಿಪಾಲ, ಸೆ.3: ಬಾಲ್ಯ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಪ್ರಯುಕ್ತ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಕ್ಕಳ ಕ್ಯಾನ್ಸರ್ ವಿಭಾಗದ ವತಿಯಿಂದ ‘ವಿಂಗ್ಸ್ ಆಫ್ ಹೋಪ್’ ಎಂಬ ವಿಶೇಷ ಕಾರ್ಯಕ್ರಮವನ್ನು ಮಂಗಳವಾರ ಹಾವಂಜೆಯ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್‌ನ ಸಭಾಂಗಣದಲ್ಲಿ ಆಯೋಜಿಸ ಲಾಗಿತ್ತು.

ಮುಖ್ಯ ಅತಿಥಿಯಾಗಿ ರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ ಮಾತನಾಡಿ, ಎಲ್ಲ ಪೋಷಕರು ಮತ್ತು ಮಕ್ಕಳು ವೈದ್ಯರ ಮೇಲೆ ವಿಶ್ವಾಸವಿಟ್ಟು ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು. ಜೊತೆಗೆ, ಗುಣಮುಖರಾದ ಕುಟುಂಬಗಳು ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಬಳಿಗೆ ಹೋಗಿ, ಅವರೊಂದಿಗೆ ಸಮಯ ಕಳೆದು ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಯಾಕೆಂದರೆ ಅದೇ ಹಾದಿಯಲ್ಲಿ ನಡೆದು ಗೆದ್ದ ಇನ್ನೊಬ್ಬರನ್ನು ಭೇಟಿಯಾಗುವುದಕ್ಕಿಂತ ದೊಡ್ಡ ಶಕ್ತಿ ಕ್ಯಾನ್ಸರ್ ವಿರುದ್ಧ ಹೋರಾಡುವ ಮಗುವಿಗೆ ಬೇರೊಂದಿಲ್ಲ ಎಂದರು.

ಅಧ್ಯಕ್ಷತೆಯನ್ನು ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸುಧಾಕರ್ ಕಂಟಿಪುಡಿ ವಹಿಸಿದ್ದರು. ಈ ಸಂದರ್ಭ ದಲ್ಲಿ ವಿವಿಧ ವಯೋಮಾನದ ಮಕ್ಕಳಿಗಾಗಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾ ಗಿತ್ತು. ಗುಣಮುಖರಾದ ಮಕ್ಕಳು ತಮ್ಮ ಪೋಷಕರೊಂದಿಗೆ ನಗುಮೊಗದಿಂದ ಇರುವ ಚಿತ್ರ ‘ಸ್ಮೃತಿ ಗೋಡೆ’ಯನ್ನು ಅನಾವರಣ ಗೊಳಿಸಲಾಯಿತು.

‘ಭರವಸೆ, ಶಕ್ತಿ ಮತ್ತು ನಗು’ ಎಂಬ ಸಂದೇಶದೊಂದಿಗೆ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಬಾಲ್ಯ ಕ್ಯಾನ್ಸರ್‌ ನಿಂದ ಗುಣಮುಖರಾದ ಸುಮಾರು 65 ಮಕ್ಕಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು. ಬಾಲ್ಯ ಕ್ಯಾನ್ಸರ್ ಜಾಗೃತಿಯ ಸಂಕೇತವಾದ ಚಿನ್ನದ ರಿಬ್ಬನ್ ಈ ಸಂದರ್ಭಕ್ಕೆ ವಿಶೇಷ ಮೆರುಗು ನೀಡಿತು. ರೋಗವನ್ನು ಎದುರಿಸಿ ಗೆದ್ದ ಮಕ್ಕಳನ್ನು ಗೌರವಿಸಲಾಯಿತು.

ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್‌ನ ನಿರ್ದೇಶಕ ಹಾಗೂ ಪ್ಯಾಲಿಯೇಟಿವ್ ಮೆಡಿಸಿನ್ ಸಲಹೆಗಾರ್ತಿ ಡಾ.ಸೀಮಾ ರಾಜೇಶ್ ರಾವ್, ಮಕ್ಕಳ ಕ್ಯಾನ್ಸರ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ. ಮತ್ತು ಮಕ್ಕಳ ಕ್ಯಾನ್ಸರ್ ವಿಭಾಗದ ಆಫ್ಟರ್ ಕಂಪ್ಲೀಷನ್ ಆಫ್ ಥೆರಪಿ’ ಕ್ಲಿನಿಕ್‌ನ ಇನ್ಚಾರ್ಜ್ ಹಾಗೂ ಸಹ ಪ್ರಾಧ್ಯಾಪಕಿ ಡಾ.ಎಮಿನ್ ಎ.ರಹಿಮಾನ್ ಉಪಸ್ಥಿತರಿದ್ದರು.

ಮಕ್ಕಳ ಕ್ಯಾನ್ಸರ್ ವಿಭಾಗದ ಡಾ.ಅರ್ಚನಾ ಸ್ವಾಗತಿಸಿದರೆ, ಡಾ.ಸ್ವಾತಿ ವಂದಿಸಿದರು. ಡಾ.ಚೈತ್ರ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor