ಗಂಗೊಳ್ಳಿ ತೌಹೀದ್ ವಿದ್ಯಾಸಂಸ್ಥೆಯಲ್ಲಿ ಪದಗ್ರಹಣ ಸಮಾರಂಭ
ಕುಂದಾಪುರ, ಸೆ.3: ಗಂಗೊಳ್ಳಿಯ ತೌಹೀದ್ ಮಹಿಳಾ ವಾಣಿಜ್ಯ ಕಾಲೇಜು ಮತ್ತು ತೌಹೀದ್ ಬಾಲಕಿಯರ ಪಿಯು ಕಾಲೇಜಿನ ನೂತನ ಸಾಲಿನ ವಿದ್ಯಾರ್ಥಿ ಪರಿಷತ್‌ನ ಪದಗ್ರಹಣ ಸಮಾರಂಭವು ಗಂಗೊಳ್ಳಿ ಮೌಲಾನಾ ಅಬುಲ್ ಕಲಾಂ ಆಜಾದ್ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ವಹಿಸಿದ್ದ ತೌಹೀದ್ ಎಜುಕೇಷನಲ್ ಟ್ರಸ್ಟ್‌ನ ಎನ್‌ಆರ್‌ಐ ಟ್ರಸ್ಟಿ ಫಜ್ಲುರ್ ರೆಹಮಾನ್ ಕೊಲ್ಕಾರ್ ಮಾತನಾಡಿ, ಶಾಲಾ ಘನತೆ, ಹಿರಿಮೆಯನ್ನು ಎತ್ತಿ ಹಿಡಿಯುವಂತೆ ನೂತನ ವಿದ್ಯಾರ್ಥಿನಿ ಸಂಘಕ್ಕೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‌ನ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ನಿಯರು ಆತ್ಮವಿಶ್ವಾಸ, ಜವಾಬ್ದಾರಿ ಮತ್ತು ಸಮರ್ಪಣಾ ಭಾವದಿಂದ ನಾಯಕತ್ವ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಟ್ರಸ್ಟಿ ಪಿ.ಎಂ.ಇಕ್ಬಾಲ್, ತೌಹೀದ್ ಆಡಳಿತ ವ್ಯವಸ್ಥಾಪಕ ಅಮ್ಜದ್ ಅಲಿ ಇಬ್ರಾಹಿಂ ಶೇಖ್, ವಿದ್ಯಾ ಸಂಸ್ಥೆ ಗಳ ಪ್ರಾಂಶುಪಾಲರು ಮಾತನಾಡಿದರು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿನಿ ನಾಯಕಿಯರು ಪ್ರಮಾಣ ವಚನ ಸ್ವೀಕರಿಸಿ, ಸಂಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು.
ವಿದ್ಯಾರ್ಥಿನಿಯರಾದ ಫಾತಿಮಾ ನುಹಾ ಖಿರಾಅತ್ ಪಠಿಸಿದರು. ಜುಹಾ ನಾತ್ ಹಾಡಿದರು. ಯುಸ್ರಾ ಎಂ. ಎಚ್. ಸ್ವಾಗತಿಸಿದರು. ಫಾತಿಮಾ ಮದ್ಹಾ ನಿರೂಪಿಸಿ, ಆಯಿಷಾ ಸಲ್ವಾ ವಂದಿಸಿದರು.