ಬೆಳ್ಳಾಲ ಮೋರ್ಟು ಮಾಕಡಿಯಲ್ಲೊಂದು ಕರುಣಾಜನಕ ಕಥೆ; ಶಿಥಿಲಾವಸ್ಥೆಯ ಮನೆಯಲ್ಲಿ ಬದುಕುತ್ತಿದೆ ಮಂಜ ಕೊರಗ ಕುಟುಂಬ
ಮನೆಗೆ ವಿದ್ಯುತ್ ಬೆಳಕೂ ಇಲ್ಲ; ಶೌಚಾಲಯವೂ ಇಲ್ಲ
ಕುಂದಾಪುರ, ಸೆ.8: ಮೂಲ ನಿವಾಸಿಗಳೆಂದು ಕರೆಸಿಕೊಳ್ಳುವ ಅದೆಷ್ಟೋ ಮಂದಿ ಕೊರಗ ಸಮುದಾಯದವರ ಬದುಕು ಇನ್ನೂ ಸುಧಾರಿಸಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆಯೊಂದಿದೆ. ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಲ ಮೋರ್ಟು, ಬೆಳ್ಳಾಡಿ-ಮಾಕಡಿ ಎಂಬಲ್ಲಿನ ಕೊರಗ ಕುಟುಂಬವೊಂದು ಈಗಲೂ ಶೋಚನೀಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದೆ.
ಇಲ್ಲಿನ ಕೊರಗ ಸಮುದಾಯದ ಮಂಜ ಎನ್ನುವವರ ಮನೆಯು ಆಗಲೋ-ಈಗಲೋ ಬೀಳುವ ಸ್ಥಿತಿಯಲ್ಲಿದ್ದು ಕಳೆದ ವರ್ಷ ಮಡದಿಯ ಅಗಲುವಿಕೆ ಬಳಿಕ ಮಂಜ ತನ್ನಿಬ್ಬರು ಹೆಣ್ಣು ಮಕ್ಕಳ ಜೊತೆ ಇದೇ ಮನೆಯಲ್ಲಿ ವಾಸವಿದ್ದಾರೆ. ಮನೆಯ ಸುತ್ತಲೂ ಬೃಹತ್ ಆಕಾರದ ಮರಗಳಿದ್ದು, ಅದರ ಕೊಂಬೆಗಳು ಮನೆಯ ಮೇಲೆ ಬೀಳುವ ಹಂತದಲ್ಲಿದ್ದು ಈಗಾಗಲೇ ಬಿದ್ದ ಕೊಂಬೆಗಳಿಂದ ಮನೆಯ ಮೇಲ್ಮಾಡು ಬಹುತೇಕ ಹಾನಿಗೀಡಾಗಿದೆ.
ಅಲ್ಲದೆ ವರ್ಷಗಳ ಹಿಂದೆ ಮನೆಯ ವಿದ್ಯುತ್ ಮೀಟರ್ ಬೋರ್ಡ್ ಮೇಲೆ ಮರದ ಕೊಂಬೆ ಬಿದ್ದು ಮೀಟರ್ ಬೋರ್ಡ್ ಸಂಪೂರ್ಣ ನಾಶವಾಗಿದ್ದು ಅಂದಿನಿಂದ ಮನೆಯ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಸಂಬಂಧಿತ ಮೆಸ್ಕಾಂ ಇಲಾಖೆ ಸ್ಥಳಕ್ಕೆ ಬೇಟಿ ನೀಡಿ ರಿಪೇರಿಯ ಭರವಸೆ ನೀಡಿ ವರ್ಷ ಕಳೆದರು ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸುವು ದಕ್ಕೆ ಯಾವುದೇ ರೀತಿಯ ಕ್ರಮವಹಿಸಿಲ್ಲ.
ಸ್ಥಳೀಯ ಆಡಳಿತ ಕೂಡಾ ಈ ಬಡ ಕುಟುಂಬಕ್ಕೆ ಯಾವುದೇ ರೀತಿಯ ಸಹಕಾರ ನೀಡಿಲ್ಲ ಎಂಬ ಆರೋಪವಿದೆ. ಹಕ್ಕುಪತ್ರದ ಸಮಸ್ಯೆ ವಸತಿ ಯೋಜನೆಗೆ ಅಡ್ಡಿಯಾಗುತ್ತಿದೆ ಎಂಬ ಸಬೂಬು ನೀಡುತ್ತಿರುವುದು ವ್ಯವಸ್ಥೆಯ ದುರಂತ.
ಹಣತೆ ಬೆಳಕಿನಲ್ಲಿ ಓದುವ ಮಕ್ಕಳು: ಮಂಜ ಅವರ ಓರ್ವ ಪುತ್ರಿ ಹತ್ತನೆ ತರಗತಿ, ಇನ್ನೊರ್ವ ಪುತ್ರಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಪಾಮಾಯಿಲ್ ಎಣ್ಣೆಯಿಂದ ಮಣ್ಣಿನ ಹಣತೆಯ ದೀಪದ ಬೆಳಕಲ್ಲಿ ಓದಬೇಕಾದ ಅನಿವಾರ್ಯತೆಯಿದೆ. ಹಾಗೆಯೇ ಮೂಲಭೂತ ಸೌಕರ್ಯ ಗಳಲ್ಲೊಂದಾದ ಶೌಚಾಲಯವನ್ನು ಸ್ಥಳೀಯಾಡಳಿತ ಒದಗಿಸಿಕೊಟ್ಟಿಲ್ಲ ಎಂಬ ಅಸಹನೆ ವ್ಯಕ್ತವಾಗಿದೆ. ನೀರು, ಸಂಪರ್ಕ ರಸ್ತೆ ಸಮಸ್ಯೆಯೂ ಈ ಕುಟುಂಬಕ್ಕಿದೆ.
ದಸಂಸ ಅಂಬೇಡ್ಕರ್‌ವಾದ ನಿಯೋಗ ಭೇಟಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಇದರ ನಿಯೋಗವೊಂದು ಇತ್ತೀಚೆಗೆ ಮಂಜು ಕೊರಗ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಮಂಜು ಕೊರಗ ಕುಟುಂಬದ ಶೋಚನೀಯ ಬದುಕಿನ ಕುರಿತು ಮಾಹಿತಿಯನ್ನು ಪಡೆದುಗೊಂಡಿದೆ.
ನಿಯೋಗದಲ್ಲಿ ತಾಲೂಕು ಪ್ರಧಾನ ಸಂಚಾಲಕ ಕೆ.ಸಿ ರಾಜು ಬೆಟ್ಟನಮನೆ, ತಾಲೂಕು ಕೋಶಾಧಿಕಾರಿ ಚಂದ್ರ ಕೊರ್ಗಿ, ಸಂಘಟನಾ ಸಂಚಾಲಕ ಶ್ರೀಕಾಂತ್ ಹಿಜಾಣ, ಮೋರ್ಟು ಗ್ರಾಮ ಶಾಖೆಯ ಸಂಚಾಲಕ ಚಂದ್ರ, ರವಿ, ಅಣ್ಣಪ್ಪ, ಭಾಸ್ಕರ, ಜಯಕರ, ದೇವಿಪ್ರಸಾದ್, ಜ್ಯೋತಿ, ನರಸಿಂಹ ಮೊದಲಾದವರಿದ್ದರು.
‘ಮಂಜು ಕೊರಗ ಅವರ ಮನೆಗೆ ಭೇಟಿ ನೀಡಿ ಇಲ್ಲಿನ ಶೋಚನೀಯ ಪರಿಸ್ಥಿತಿ ನೋಡಿ ದು:ಖವಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾ ದರೂ ಮೂಲನಿವಾಸಿಗಳ ಪಾಡು ಹೇಗಿದೆ ಎಂಬುದಕ್ಕೆ ಜ್ವಲಂತ ಇದು ಸಾಕ್ಷಿಯಾಗಿದೆ. ಸಂಬಂದಪಟ್ಟ ಆಡಳಿತ ಕೂಡಲೇ ಇವರ ಸಮಸ್ಯೆಗೆ ಸ್ಪಂದಿಸಿ ಮೂಲಸೌಕರ್ಯ ಒದಗಿಸಬೇಕು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಳಿವಿನಂಚಿನಲ್ಲಿದ್ದು ವಿರಳ ಜನಸಂಖ್ಯೆಯಿರುವ ಕೊರಗ ಕುಟುಂಬಕ್ಕೆ ಇಂತಹ ಸ್ಥಿತಿ ಬರಲು ಆಳುವ ಜನಪ್ರತಿನಿಧಿಗಳು, ಸಂಬಂಧಿತ ಇಲಾಖೆಗಳು ಕಾರಣ. ಶೀಘ್ರವೇ ಮಂಜ ಕೊರಗ ಅವರ ಮನೆಯನ್ನು ದುರಸ್ತಿ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮೂಲಭೂತಸೌಕರ್ಯವಾದ ಶೌಚಾಲಯ ನಿರ್ಮಿಸಿಕೊಡಬೇಕು. ಮಂಜ ಅವರ ಇಬ್ಬರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ವ್ಯವಸ್ಥೆ ಕಲ್ಪಿಸಬೇಕು. ಬೆಳ್ಳಾಡಿ ಮಾಕಾಡಿಯ ಎಲ್ಲಾ ಕೊರಗ ಕುಟುಂಬಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡಲು ವಿಶೇಷ ಅನುದಾನವನ್ನು ಒದಗಿಸಬೇಕು. ಇಲ್ಲವಾದರೆ ಕೆರಾಡಿ ಗ್ರಾಮ ಪಂಚಾಯತ್ ಕಛೇರಿ ಎದುರು ಅನಿರ್ದೀಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗುತ್ತದೆ.
-ಕೆ.ಸಿ. ರಾಜು ಬೆಟ್ಟಿನಮನೆ, ಕರ್ನಾಟಕ ದಸಂಸ (ಅಂಬೇಡ್ಕರ್‌ವಾದ) ತಾಲೂಕು ಸಮಿತಿ ಪ್ರಧಾನ ಸಂಚಾಲಕ.