ನೀಲಿಶಾಲು ಸಮಾನತೆ, ಸ್ವಾಭಿಮಾನ ಸಂಕೇತ: ನಾರಾಯಣ ಮಣೂರು
ಪ್ರತಾಪ್‌ಸಿಂಹನ ಪ್ರತಿಕೃತಿ ದಹಿಸಿ ಅಂಬೇಡ್ಕರ್ ಸೇನೆಯಿಂದ ಪ್ರತಿಭಟನೆ
ಉಡುಪಿ, ಸೆ.21: ಉಡುಪಿ ಅಂಬೇಡ್ಕರ್ ಯುವಸೇನೆ ವತಿಯಿಂದ ದಲಿತ, ಸಂವಿಧಾನ ಹಾಗೂ ಮಾನವ ವಿರೋಧಿ ಮಾಜಿ ಸಂಸದ ಪ್ರತಾಪ್ ಸಿಂಹನನ್ನು ಕರ್ನಾಟಕದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಸೋಮವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಾಪ್ ಸಿಂಹನ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ನಾರಾಯಣ ಮಣೂರು, ನೀಲಿಶಾಲು ಬುದ್ಧ, ಬಸವ, ನಾರಾಯಣ ಗುರು, ಕುವೆಂಪು ಸಹಿತ ಮಹನೀಯರ ಅರಿವಿನ ನೆಲೆಯಲ್ಲಿ ಹಾಕಿಕೊಂಡಿರುವ ಸ್ವಾಭಿಮಾನದ ಸಂಕೇತ. ಪ್ರತಾಪ್‌ಸಿಂಹನ ಪರಿವಾರದ ಪರಿಕಲ್ಪನೆಯಲ್ಲಿ ದೇಶ ಅಂದರೆ ಗಡಿ, ಬಾವುಟ ಮಾತ್ರ. ಆದರೆ ಭಾರತ ದೇಶ ಅಂದರೆ 145ಕೋಟಿ ಜನ, ಇಲ್ಲಿನ ಜನರ ಬದುಕು ಮತ್ತು ಸಾಮರಸ್ಯ ಎಂಂಬುದು ಆ ಮೂರ್ಖನಿಗೆ ಅರ್ಥ ಮಾಡಿಸಬೇಕು ಎಂದರು.
ನೀಲಿ ಶಾಲು ಎಂಬುದು ಭಯೋತ್ಪಾದನೆಯನ್ನು ಹುಟ್ಟು ಹಾಕುವ ಧ್ಯೋತಕ ಅಲ್ಲ. ಅದು ಸಮಾನತೆ ಮತ್ತು ಶತಮಾನಗಳಿಂದ ದಲಿತರ ಅಸ್ಪಶ್ಯತೆ, ಅವಮಾನ, ಶೋಷಣೆ, ಸ್ವಾಭಿಮಾನದ ಸಂಕೇತವಾಗಿದೆ. ಇದು ಆತ್ಮಾಭಿನಮಾದ ಸಂಕೇತವಾಗಿದೆ. ಇದು ನಾವು ಬೆಂಕಿ ಹಚ್ಚಲು ಹಾಕಿ ಕೊಂಡ ಶಾಲು ಆಲ್ಲ ಎಂದು ಅವರು ತಿಳಿಸಿದರು.
ದಲಿತ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ದಸಂಸ ಬಗ್ಗೆ ಹೀನಾಯವಾಗಿ ಮಾತನಾಡಿರುವ ಪ್ರತಾಪ್ ಸಿಂಹನ ನಡೆ ಖಂಡನೀಯ. ನೀಲಿ ಶಾಲು ಎಂದಿಗೂ ಈ ಸಮಾಜದ ಸಮಾನತೆಯನ್ನು ಬೋಧಿಸುತ್ತದೆ. ಆದರೆ ತ್ಯಾಗದ ಸಂಕೇತವಾಗಿರುವ ಕೇಸರಿಯನ್ನು ಇಂದು ಪ್ರತಾಪ್‌ಸಿಂಹ ಭಯೋತ್ಪಾದನೆಗೆ ಬಳಸುತ್ತಿದ್ದಾರೆ. ನಮ್ಮ ನೀಲಿ ಶಾಲಿನ ಎದುರು ನಿಮ್ಮ ಕೆಸರಿ ಶಾಲಿನ ಭಯೋತ್ಪಾದನೆ ನಡೆಯುವುದಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಪ್ರಮುಖರಾದ ಹರೀಶ್ ಸಾಲ್ಯಾನ್, ಶಂಕರ್‌ದಾಸ್ ಚೇಂಡ್ಕಳ, ಶಿವಾನಂದ ಮೂಡಬೆಟ್ಟು, ಶೇಖರ ಹಾವಂಜೆ, ಯುವರಾಜ್, ಸಂಧ್ಯಾ ತಿಲಕ್‌ರಾಜ್, ಸಂಜೀವ ಬಳ್ಕೂರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡ ರಾದ ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ಉದ್ಯಾವರ ನಾಗೇಶ್ ಕುಮಾರ್, ಕುಶಲ್ ಶೆಟ್ಟಿ, ಸತೀಶ್ ಕೊಡವೂರು, ಮೀನಾಕ್ಷಿ ಬನ್ನಂಜೆ, ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.