ಸೆ.25ರಂದು ಮೊಗವೀರ ಕುಲಗುರುಗಳ ಕಂಚಿನ ಪುತ್ಥಳಿ ಅನಾವರಣ
ಕಾಪು, ಸೆ.21: ಶ್ರೀಕ್ಷೇತ್ರ ಉಚ್ಚಿಲದಲ್ಲಿ ಸ್ಥಾಪಿಸಲಾದ ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರು ಗಳಾದ ಕೀರ್ತಿಶೇಷ ಶ್ರೀಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲ್ಪಟ್ಟಿರುವ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ಗುರಿಕಾರರಿಗೆ ಗೌರವಧನ ವಿತರಣಾ ಕಾರ್ಯಕ್ರಮವು ಸೆ.25ರಂದು ಬೆಳಗ್ಗೆ 10ಗಂಟೆಗೆ ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಲಿದೆ.
ಮೊಗವೀರ ಸಮಾಜ ಬಾಂಧವರ ಸಂಕಲ್ಪದಂತೆ ಸುಮಾರು ರೂ.3 ಕೋಟಿ ವೆಚ್ಚದಲ್ಲಿ, 31 ಅಡಿ ಎತ್ತರ ಹಾಗೂ ಸುಮಾರು 14 ಸಾವಿರ ಕೆ.ಜಿ. ತೂಕದ ಕಂಚನ್ನು ಬಳಸಿ ನಿರ್ಮಿಸಲಾದ ಭವ್ಯ ಪುತ್ಥಳಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅನಾವರಣಗೊಳಿಸಲಿ ದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಗುರಿಕಾರರಿಗೆ ಗೌರವಧನ ವಿತರಿಸಲಿದ್ದು, ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.