ಲಂಚ ಪ್ರಕರಣ: ಆರ್‌ಟಿಓ, ಸಹಾಯಕ ದೋಷಮುಕ್ತಿ
ಉಡುಪಿ, ಸೆ.22: ಲಂಚ ಸ್ವೀಕರಿಸಿದ ಲೋಕಾಯುಕ್ತ ಪ್ರಕರಣದ ಆರೋಪಿಗಳಾದ ಆರ್‌ಟಿಓ ಹಾಗೂ ಸಹಾಯಕ ನನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಖುಲಾಸೆಗೊಳಿಸಿ ಆದೇಶ ನೀಡಿದೆ.
ವಿಷ್ನೆಶ್ ಸತೀಶ್ ಕುಮಾರ್ ಎಂಬವರ ಕಾರಿನ ನೋಂದಣಿ ಶುಲ್ಕ ವಾಪಾಸು ನೀಡುವ ವಿಚಾರದಲ್ಲಿ ಆಗಿನ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ವರ್ಣೆಕರ್ ಲಂಚದ ಬೇಡಿಕೆಯನ್ನು ಮುಂದಿ ಟ್ಟಿದ್ದರು. ಈ ಹಿನ್ನೆಲೆಯಲ್ಲಿ 2019ರ ಮಾರ್ಚ್‌ನಲ್ಲಿ ಆರೋಪಿತರ ವಿರುದ್ಧ ವಿಘ್ನೇಶ್ ಉಡುಪಿ ಎಸಿಬಿ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಲೋಕಾಯುಕ್ತ ಕಾನೂನಡಿರಲ್ಲಿ ಪ್ರಕರಣ ದಾಖಲಾಗಿತ್ತು.
ಈ ದೂರಿನ ಆಧಾರದ ಮೇಲೆ ಎಸಿಬಿ ಪೋಲೀಸರ ತಂಡ ಆರ್‌ಟಿಓ ರಮೇಶ್ ವರ್ಣೆಕರ್ 4,000ರೂ. ಹಣವನ್ನು ಪಡೆಯುವ ಸಂದರ್ಭದಲ್ಲಿ ಬಂಧಿಸಿದ್ದರು. ತದನಂತರ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ನಂತರ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಎಸಿಬಿ ರದ್ದು ಗೊಂಡಿದ್ದು, ಪ್ರಕರಣದ ವಿಚಾರಣೆಯನ್ನು ಉಡುಪಿ ಲೋಕಾಯುಕ್ತ ಠಾಣೆಗೆ ಹಸ್ತಾಂತರಿಸಲಾಗಿತ್ತು.
ಪ್ರಕರಣದ ತನಿಖೆಯಲ್ಲಿ ಹಣವನ್ನು ಪಡೆದ ಆರ್‌ಟಿಓ ಅಧಿಕಾರಿ ಅದನ್ನು ತನ್ನ ಸಹಾಯಕನಿಗೆ ನೀಡಿರುವುದಾಗಿ ತಿಳಿಸಿದ ಮೇರೆಗೆ ಸಹಾಯಕ ಮುನಾಫ್ ಮೇಲೂ ಪ್ರಕರಣ ದಾಖಲಾಗಿತ್ತು. ಅಂತಿಮ ವರದಿಯನ್ನು ಪುರಸ್ಕರಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಎಲ್ಲಾ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿತು.
ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಧೀಶ ಕಿರಣ್ ಎಸ್.ಗಂಗಣನವರ್, ಅಭಿಯೋಜನೆಯು ಆರೋಪಿತರ ಮೇಲಿನ ಆರೋಪನ್ನು ಸಂಶಯತೀತವಾಗಿ ಸಾಭಿತುಪಡಿಸಲು ವಿಫಲವಾಗಿದೆ ಎಂದು ಪರಿಗಣಿಸಿ ಇಬ್ಬರು ಆರೋಪಿಗಳನ್ನು ಪ್ರಕರಣದಿಂದ ದೋಷಮುಕ್ತಿಗೊಳಿಸಿ ಆದೇಶ ನೀಡಿದರು. ಆರೋಪಿಗಳ ಪರವಾಗಿ ಉಡುಪಿಯ ನ್ಯಾಯಾವಾದಿ ಚೇರ್ಕಾಡಿ ಅಖಿಲ್ ಬಿ.ಹೆಗ್ಡೆ ಮತ್ತು ಸಂಜೀವ ಎ. ವಾದಿಸಿದ್ದರು.