ಉಡುಪಿ, ಸೆ.24: ಇಂಜಿನಿಯರ್‌ಗಳ ಜೀವನ ಪರಿಪೂರ್ಣತೆಯನ್ನು ಪಡೆಯಬೇಕಾದರೆ ನಿಷ್ಕಾಮ ಕರ್ಮದ ಮನೋಭಾವ ಬೆಳೆಸಿಕೊಳ್ಳಬೇಕು. ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಜವಾಬ್ದಾರಿಯಾಗಿ ಸ್ವೀಕರಿಸಬೇಕು. ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನ ಹಾಗೂ ಆಧುನಿಕ ವಿಧಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಕಾರ್ಯನಿರ್ವಹಣೆಗೆ ಆದ್ಯತೆ ನೀಡಿದಾಗ ವೃತ್ತಿಪರ ಪ್ರಗತಿ ಯೊಂದಿಗೆ ಸಮಾಜಕ್ಕೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಮಣಿಪಾಲ ಎಂಐಟಿ ಫ್ಯಾಕಲ್ಟಿ ಡೆವಲಪ್ಮೆಂಟ್ ಆ್ಯಂಡ್ ವೆಲ್ಫೇರ್ ಅಸೋಸಿಯೇಟ್ ಡೈರೆಕ್ಟರ್ ಡಾ.ರಾಘವೇಂದ್ರ ಕೆ. ಹೊಳ್ಳ ಹೇಳಿದ್ದಾರೆ.

ಉಡುಪಿ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ಉಡುಪಿ ಹೊಟೇಲ್ ಕಿದಿಯೂರಿನ ಅನಂತ ಶಯನ ಹಾಲ್‌ನಲ್ಲಿ ಬುಧವಾರ ಆಯೋಜಿಸಲಾದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಇಂಜಿನಿಯರ್ಸ್‌ ತಮ್ಮ ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಂದ ಹಿಂದೆ ಸರಿಯದೆ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕು. ತಾಂತ್ರಿಕ ಜ್ಞಾನದ ಜತೆಗೆ ಸಾಮಾಜಿಕ ಕಳಕಳಿ, ಸೇವಾ ಮನೋಭಾವ, ಕರ್ತವ್ಯನಿಷ್ಠೆಯನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು.

ಮೆಸ್ಕಾಂ ಉಡುಪಿ ಉಪವಿಭಾಗದ ಎಇಇ ಎಸ್.ಗಣರಾಜ ಭಟ್ ಮಾತನಾಡಿ, ಇಂಜಿನಿಯರ್‌ಗಳು ವೃತ್ತಿ ಜೀವನ ದಲ್ಲಿ ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿಕೊಂಡು ತಮ್ಮ ಕಾರ್ಯದಲ್ಲಿ ಸಂಪೂರ್ಣ ಮುತುವರ್ಜಿ ಹಾಗೂ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು. ಗುಣಮಟ್ಟದ ಹಾಗೂ ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಸರ್ ಎಂ.ವಿಶ್ವೇಶ್ವರಯ್ಯನವರ ಕುರಿತು ಇಂಜಿನಿಯರ್ ಪಟ್ಟಾಭಿರಾಮ್ ಆಚಾರ್ಯ ಮಾತನಾಡಿದರು. ಕೋಶಾಧಿಕಾರಿ ಗಣೇಶ್ ಎಸ್.ಸಾಲ್ಯಾನ್, ಸಂಘದ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದುಷಿ ಸಂಗೀತಾ ಬಾಲಚಂದ್ರ ಅವರಿಗೆ ’ಉಡುಪಿ ಕೋಗಿಲೆ’, ನೃತ್ಯ ಕಲಾವಿದೆ ವಿದುಷಿ ದೀಕ್ಷಾ ರಾಮಕೃಷ್ಣ ಅವರಿಗೆ ’ಕೀರ್ತನಾ ಕಲಾಶ್ರೀ’ ಹಾಗೂ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ’ಸೇವಾ ದುರಂಧರ’ ಈಶ್ವರ ಮಲ್ಪೆ ಅವರಿಗೆ ’ಮತ್ಸ್ಯ ರಾಜ’ ಬಿರುದಿನೊಂದಿಗೆ ಸಮ್ಮಾನಿಸಲಾಯಿತು. ಪ್ರತಿಭಾನ್ವಿತ ಎಂಜಿನಿಯರಿಂಗ್ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ನೀಡಿ ಸಮ್ಮಾನಿಸಲಾಯಿತು.

ಅಸೋಸಿಯೇಶನ್ ಅಧ್ಯಕ್ಷ ಕೆ.ರಂಜನ್ ಸ್ವಾಗತಿಸಿದರು.ಅವಿನಾಶ್ ಕಾಮತ್ ನಿರೂಪಿಸಿದರು. ಉಪಾಧ್ಯಕ್ಷ ಭರತ್ ಭೂಷಣ್, ಆರ್ಕಿಟೆಕ್ಟ್ ಪವಿತ್ರಾ ಶೆಣೈ, ಎಂಜಿನಿಯರ್ ಗಣೇಶ್ ಬೈಲೂರು, ಪುನೀತ್ ಕುರ್ಮಾ ಅತಿಥಿಗಳನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಹರೀಶ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor