ಕಾರು ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
ಪಡುಬಿದ್ರಿ, ಸೆ.24: ಕಾರೊಂದು ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಗುರುವಾರ ಪಡುಬಿದ್ರಿ ಜಂಕ್ಷನ್‌ನಲ್ಲಿ ನಡೆದಿದೆ.
ಮೃತರನ್ನು ಅಂಬಲಪಾಡಿಯ ನಿವಾಸಿ ನಿತ್ಯಾನಂದ ಹೊಳ್ಳ(45) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು, ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ಸವಾರ ನಿತ್ಯಾನಂದ ಅವರ ತಲೆಯ ಮೇಲೆಯೇ ಕಾರಿನ ಹಿಂಭಾಗದ ಚಕ್ರವು ಹರಿಯಿತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ನಿತ್ಯಾನಂದ ಹೊಳ್ಳ, ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ