ಉಡುಪಿ: ಸೆ.27ಕ್ಕೆ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣೆ
1273 ವಿದ್ಯಾರ್ಥಿಗಳಿಗೆ ಒಟ್ಟು 1.75 ಕೋಟಿ ರೂ. ಸ್ಕಾಲರ್ಶಿಪ್
ಉಡುಪಿ, ಸೆ.24: ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್‌ನ 22ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸೆ.27ರಂದು ರವಿವಾರ ಬೆಳಿಗ್ಗೆ 9:30ರಿಂದ ಸಂಜೆ 4:30ರವರೆಗೆ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಬೆಳಗ್ಗೆ 10 ಗಂಟೆಗೆ ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯರು ಉದ್ಘಾಟಿಸ ಲಿದ್ದಾರೆ. ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಲಿದ್ದಾರೆ.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವರು ಶುಭಾಶಂಸನೆ ಮಾಡಲಿದ್ದಾರೆ. ಕಾರ್ಯಕ್ರಮ ದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಕಾರ್ಯದರ್ಶಿ ಡಾ. ನಾರಾಯಣ ಸಭಾಹಿತ, ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಶಿವಮೊಗ್ಗದ ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ. ಪಿ. ನಾರಾಯಣ, ಗೋವಾ ಒಎನ್‌ಜಿಸಿಯ ನಿವೃತ್ತ ಸಿಜಿಎಂ. ಬನ್ನಾಡಿ ನಾರಾಯಣ ಆಚಾರ್, ಉಡುಪಿ ಆದರ್ಶ ಆಸ್ಪತ್ರೆಯ ಡಾ. ಜಿ. ಎಸ್. ಚಂದ್ರಶೇಖರ ಹಾಗೂ ಇತರರು ಉಪಸ್ಥಿತರಿರುವರು.
ವಿದ್ಯಾಪೋಷಕ್ ವಿದ್ಯಾರ್ಥಿಗಳ ಕುಟುಂಬಕ್ಕೆ ಮಾಹೆಯು ಕೊಡಮಾಡಿದ ಉಚಿತ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕಾರ್ಡನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ಮುರಲಿ ಕಡೆಕಾರ್ ತಿಳಿಸಿದರು.
ಅಪರಾಹ್ನ 2:30ಕ್ಕೆ ಜರಗುವ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಪರ್ಯಾಯ ಶೀರೂರು ಮಠಾಧೀಶ ಶ್ರೀವೇದವರ್ಧನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು, ಅಧ್ಯಕ್ಷತೆಯನ್ನು ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ.ಜಿ. ಶಂಕರ್ ವಹಿಸಲಿದ್ದಾರೆ. ಯಕ್ಷಗಾನ ಕಲಾರಂಗದ ವಾರ್ಷಿಕ ಸಂಚಿಕೆ ‘ಕಲಾಂತರಂಗ-2026’ನ್ನು ಉಡುಪಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಡುಗಡೆಗೊಳಿಸುವರು. ಕರ್ಣಾಟಕ ಬ್ಯಾಂಕಿನ ಜಿಎಂ. ಬಿ.ಜಿ. ಸಾಮಗ ಶುಭಾಶಂಸನೆ ಮಾಡಲಿದ್ದಾರೆ.
ಈ ಬಾರಿ ವಿದ್ಯಾಪೋಷಕ್‌ನ 1199 ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ 74 ಯಕ್ಷಗಾನ ಕಲಾವಿದರ ಮಕ್ಕಳು ಸೇರಿದಂತೆ ಒಟ್ಟು 1273 ವಿದ್ಯಾರ್ಥಿಗಳಿಗೆ ಒಟ್ಟಾರೆಯಾಗಿ 1,75,81,500 ರೂ. ಸಹಾಯಧನವನ್ನು ವಿತರಿಸಲಾಗುತ್ತಿದೆ. ಇವರಲ್ಲಿ 338 ಮಂದಿ ಯುವಕರು ಹಾಗೂ 935 ಯುವತಿಯರಿದ್ದಾರೆ.
ಅಲ್ಲದೇ ಈ ಬಾರಿ 8.50ಲಕ್ಷ ರೂ. ವೆಚ್ಚದಲ್ಲಿ 15 ಮಂದಿ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗು ತ್ತಿದೆ. ಕಳೆದ ವರ್ಷ 1241 ವಿದ್ಯಾರ್ಥಿಗಳಿಗೆ 1.40 ಕೋಟ ರೂ.ವಿದ್ಯಾರ್ಥಿ ವೇತನ ವಿತರಿಸಲಾಗಿತ್ತು ಎಂದು ಅಧ್ಯಕ್ಷ ಎಂ. ಗಂಗಾಧರ ರಾವ್ ವಿವರಿಸಿದರು.
ಅಲ್ಲದೇ ಸಂಸ್ಥೆಯು ವರ್ಷದಲ್ಲಿ ಓರ್ವ ಕಲಾವಿದ ಸೇರಿದಂತೆ ಈವರೆಗೆ ಒಟ್ಟು 23 ವಿದ್ಯಾರ್ಥಿಗಳಿಗೆ ಒಟ್ಟು 1.47 ಕೋಟಿ ರೂ. ವೆಚ್ಚದಲ್ಲಿ 24 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಇದರಿಂದ ನಿರ್ಮಿಸಿಕೊಟ್ಟ ಮನೆಗಳ ಸಂಖ್ಯೆ 103ಕ್ಕೇರಿದ್ದು, ಒಂದು ವಾರದಲ್ಲಿ ಇನ್ನೆರಡು ಮನೆಗಳು ಬಡ ವಿದ್ಯಾರ್ಥಿ ಕುಟುಂಬಕ್ಕೆ ಹಸ್ತಾಂತರಗೊಳ್ಳಲಿದೆ. ಇನ್ನೂ 21 ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿವೆ. ಜೊತೆ ಇನ್ನೂ 32 ಮನೆಗಳು ನಿರ್ಮಾಣಕ್ಕೆ ಆಯ್ಕೆಯಾಗಿವೆ ಎಂದು ಮುರಲಿ ಕಡೆಕಾರ್ ವಿವರಿಸಿದರು.