ದಸರಾ ಕವಿಗೋಷ್ಠಿ ಉದ್ಘಾಟನೆಗೆ ಹಿರಿಯ ಸಾಹಿತಿ ವೈದೇಹಿಗೆ ಆಹ್ವಾನ
ಮಣಿಪಾಲ, ಸೆ.25: ಈ ಬಾರಿ ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ದಸರಾ ಕವಿಗೋಷ್ಠಿ ಯನ್ನು ಉದ್ಘಾಟಿಸಲಿರುವ ಹಿರಿಯ ಕವಯಿತ್ರಿ, ಸಾಹಿತಿ ವೈದೇಹಿ ಅವರನ್ನು ಮಣಿಪಾಲದ ಅವರ ನಿವಾಸದಲ್ಲಿ ಶುಕ್ರವಾರ ಸನ್ಮಾನಿಸುವ ಮೂಲಕ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈದೇಹಿ, ವಿಜಯನಗರ ಸಾಮ್ರಾಜ್ಯ ಕಾಲದಿಂದ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ ಎಂದು ಅಭಿಪ್ರಾಯಪಟ್ಟರು. ಇಲ್ಲಿನ ಅನಂತನಗರದಲ್ಲಿರುವ ಅವರ ನಿವಾಸ ‘ಇರುವಂತಿಗೆ’ಗೆ ಮೈಸೂರಿನಿಂದ ದಸರಾ ಕವಿಗೋಷ್ಠಿ ಉಪ ಸಮಿತಿಯು ಶುಕ್ರವಾರ ಬಂದು ಸನ್ಮಾನಿಸುವ ಮೂಲಕ ಆಹ್ವಾನಿಸಿದಾಗ ಅವರು ಮಾತನಾಡಿದರು.
ಇಂದು ಕವಿಗೋಷ್ಠಿಗಳಿಗೆ ಜನರು ಹೆಚ್ಚು ನೆರೆಯುತ್ತಾರೆ. ಕೇಳುವವರೂ ಹೆಚ್ಚಿದ್ದಾರೆ. ಶ್ರವಣ ಮುಖ್ಯ. ಇದರಿಂದ ವಿವಿಧ ಕವಿಗಳ ಕವನಗಳನ್ನು ಆಲಿಸಲು ಸಹೃದಯರು ಹೆಚ್ಚುವುದು ಸಹಜ. ನನಗಂತೂ ಹೊಸ ತಲೆಮಾರಿನ ಕವಿಗಳು ಕಾವ್ಯಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲವಿದೆ ಎಂದು ಹೇಳಿದರು.
2007ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದೆ. ಇದಕ್ಕೂ ಮೊದಲೊಮ್ಮೆ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದೆ ಎಂದು ಸ್ಮರಿಸಿದರು.
ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷರಾದ ಪ್ರೊ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ್ ಎಂ.ಬಿ., ಕವಿಗೋಷ್ಠಿ ಉಪಸಮಿತಿಯ ಸಮನ್ವಯಾಧಿಕಾರಿ ಡಾ.ಉಮೇಶ ಬೇವಿನಹಳ್ಳಿ, ಡಾ.ತ್ರಿವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ರಾದ ಸಿದ್ದನಾಗಪ್ಪ ಬಿ.ಬಿ. ಹಾಗೂ ಚಂದನಾ ಅಲ್ಲದೇ ವೈದೇಹಿ ಪುತ್ರಿ ಚಿತ್ರಕಲಾವಿದೆ ಪಲ್ಲವಿ ಅನಿಲ್ ಹಾಗೂ ಅಳಿಯ ಟಿ.ಅನಿಲಕುಮಾರ್ ಈ ವೇಳೆ ಉಪಸ್ಥಿತರಿದ್ದರು.