ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಹಿರಿಯ ನಾಗರಿಕರಿಗೆ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆ
ಉಡುಪಿ, ಸೆ.25: ಪ್ರಸಕ್ತ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯಡಿ ಹಿರಿಯನಾಗರಿಕರಿಗೆ ವಿವಿಧ ಥೆರಪಿ ಕಾರ್ಯಕ್ರಮವನ್ನು ಸೆ.28ರಂದು ಬೆಳಗ್ಗೆ 9 ಗಂಟೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಿರಿಯ ನಾಗರಿಕರ ಗುರುತು ಚೀಟಿ ಅಥವಾ ವಯಸ್ಸಿನ ಅಧಿಕೃತ ದಾಖಲೆಗಳೊಂದಿಗೆ ಈ ಕೆಳಕಂಡ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
ಕ್ರೀಡಾ ಸ್ಪರ್ಧೆಗಳು: 60-69 ವರ್ಷ, 70 ವರ್ಷ ಹಾಗೂ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ನಡಿಗೆ, ಬಕೆಟ್‌ಗೆ ಬಾಲ್ ಎಸೆಯುವ ಸ್ಪರ್ಧೆಗಳು, 60 ವರ್ಷ ಹಾಗೂ ಮೇಲ್ಪಟ್ಟ ಪುರುಷರಿಗೆ ಕೇರಂ ಹಾಗೂ 60 ವರ್ಷ ಹಾಗೂ ಮೇಲ್ಪಟ್ಟ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ (ರಂಗೋಲಿ ಬಿಡಿಸಲು ಬೇಕಾಗುವ ಸಾಮಾಗ್ರಿಗಳನ್ನು ಸ್ಪರ್ಧಾರ್ತಿಗಳು ತರಬೇಕು) ಗಳು ನಡೆಯಲಿವೆ.
ಸಾಂಸ್ಕೃತಿಕ ಸ್ಪರ್ಧೆಗಳು:60-69 ವರ್ಷ, 70 ವರ್ಷ ಮತ್ತು ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಏಕಪಾತ್ರ ಅಭಿನಯ ಮತ್ತು ಗಾಯನ ಸ್ಪರ್ಧೆಗಳು ನಡೆಯಲಿವೆ.
ವಿವಿಧ ಥೆರಪಿ ಚಟುವಟಿಕೆಗಳು: ಮಾರ್ಗದರ್ಶಿ ಧ್ಯಾನ, ನೃತ್ಯ ಥೆರಪಿ (ಲಘು ವ್ಯಾಯಾಮ), ಸಂಗೀತ ಥೆರಪಿ (ಭಕ್ತಿಗೀತೆಗಳು ಮತ್ತು ಹಳೆಯ ಕನ್ನಡ ಸುಮಧುರ ಗೀತೆಗಳು) ಮತ್ತು ಆರ್ಟ್ ಥೆರಪಿ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ’ಸಿ’ ಬ್ಲಾಕ್, ತಳ ಅಂತಸ್ತು, ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820- 2574810 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳ ಪ್ರಕಟಣೆ ತಿಳಿಸಿದೆ.