‘ಕ್ಷಮತ್ವಂ’ ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ, ಸೆ.29: ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕ್ಷಮತ್ವಂ 2026- ಸ್ವಯಂ ರೋಗನಿರೋಧಕ ಕಾಯಿಲೆಗಳಲ್ಲಿ ಅನುವಾದಾತ್ಮಕ ಆಯುರ್ವೇದ ಅಂತರರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ಜರಗಿತು.
ಅಧ್ಯಕ್ಷತೆಯನ್ನು ವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಯುಷ್ ವಿಭಾಗದ ಡೀನ್ ಮತ್ತು ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಸಂಜಯ್ ಕೆ.ಎಸ್. ಸಮ್ಮೇಳನದ ಶೈಕ್ಷಣಿಕ ಮಹತ್ವ ಹಾಗೂ ಆಯುರ್ವೇದದಲ್ಲಿ ಸಂಶೋಧನೆಯನ್ನು ಮುನ್ನಡೆಸುವ ಅಗತ್ಯದ ಕುರಿತು ಮಾತನಾಡಿದರು.
ಕ್ಷಮತ್ವಂ 2026 ಸಮ್ಮೇಳನವು ಸಂಶೋಧನೆಯ ಮೂಲಕ ಆಯುರ್ವೇದ ಜ್ಞಾನವನ್ನು ಬಲಪಡಿಸಲು, ವೈಜ್ಞಾನಿಕ ಆಧಾರಗಳನ್ನು ಸ್ಥಾಪಿಸಲು ಮತ್ತು ಆಯುರ್ವೇದದ ಕೊಡುಗೆಗಳನ್ನು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ತಲುಪಿಸಲು ಒಂದು ಪ್ರಮುಖ ವೇದಿಕೆಯನ್ನು ಒದಗಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಮಾತನಾಡಿ, ಆಯು ರ್ವೇದದ ತತ್ವಗಳು, ಚಿಕಿತ್ಸಾ ಪದ್ಧತಿಗಳು ಮತ್ತು ಔಷಧಗಳನ್ನು ವೈಜ್ಞಾನಿಕವಾಗಿ ದೃಢೀಕರಿಸಲು ದೊಡ್ಡ ಪ್ರಮಾಣದ ಬಹುಕೇಂದ್ರೀಯ ಸಂಶೋಧನೆ ಅತೀ ಅಗತ್ಯವಾಗಿದೆ. ಆಯುರ್ವೇದ ಜ್ಞಾನವನ್ನು ಸಮಕಾಲೀನ ಸಂಶೋಧನಾ ವಿಧಾನಗಳೊಂದಿಗೆ ಸಂಯೋಜಿಸಿ, ಅದರ ಪರಿಣಾಮ ಕಾರಿತ್ವವನ್ನು ವೈಜ್ಞಾನಿಕವಾಗಿ ಸ್ಥಾಪಿಸುವ ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಪ್ರಾಧ್ಯಾಪಕ ಡಾ.ರವಿಶಂಕರ್ ಬಿ., ಪಾಲಕ್ಕಾಡ್‌ನ ಸ್ವಾಸ್ಥ್ಯಕ್ಷೇತ್ರಂ ಆಯುರ್ವೇದ ಆರೋಗ್ಯ ಕೇಂದ್ರದ ಮುಖ್ಯ ಸಲಹೆಗಾರ ವೈದ್ಯ ಡಾ.ಎನ್.ವಿ. ಶ್ರೀವತ್ಸ, ಕಾಲೇಜಿನ ಉಪಪ್ರಾಂಶುಪಾಲ(ಕ್ಲಿನಿಕಲ್) ಡಾ.ನಿರಂಜನ್ ರಾವ್, ಕೊಯಮತ್ತೂರಿನ ಸೆಂರ್ಟ ಫಾರ್ ಇಂಡಿಯನ್ ಮೆಡಿಕಲ್ ಹೆರಿಟೇಜ್‌ನ ಅಧ್ಯಕ್ಷ ಡಾ. ಅಜಯನ್ ಸದಾನಂದನ್ ಭಾಗವಹಿಸಿದ್ದರು.
ಎಸ್‌ಡಿಎಂ ಕಾಲೇಜಿನ ಉಪಪ್ರಾಂಶುಪಾಲ(ಶೈಕ್ಷಣಿಕ) ಡಾ.ನಾಗರಾಜ್ ಎಸ್., ಕ್ಷಮತ್ವಂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಪ್ರಸನ್ನ ಎನ್.ಮೊಗಸಾಲೆ ಮತ್ತು ಡಾ.ಅರ್ಹಂತ್ ಕುಮಾರ್ ಎ. ಉಪಸ್ಥಿತರಿದ್ದರು. ಡಾ.ಅರುಣ್ ಕುಮಾರ್ ಮತ್ತು ಡಾ.ಶುಭಾ ಪಿ.ಯು. ಕಾರ್ಯಕ್ರಮ ನಿರೂಪಿಸಿದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ. ಶ್ರೀಕಾಂತ್ ಪಿ. ವಂದಿಸಿದರು.