ಕುಂದಾಪುರ ಬರಪೀಡಿತ ತಾಲೂಕು ಘೋಷಣೆ ಆಗದಿರುವುದಕ್ಕೆ ಶಾಸಕ ಕಿರಣ್ ಕೊಡ್ಗಿ ಅಸಮಾಧಾನ
ಕುಂದಾಪುರ ತಾಲೂಕು ಕ್ರೈಮಾಸಿಕ ಕೆಡಿಪಿ ಸಭೆ
ಕುಂದಾಪುರ, ಸೆ.29: ಮಳೆ ಮಾಪಕ ಕೇಂದ್ರ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಕುಂದಾಪುರ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಲು ಸಮಸ್ಯೆಯಾಗಿದೆ. ಸಮೀಪದ ಬೈಂದೂರು ತಾಲೂಕು ಬರಪೀಡಿತ ಎಂದು ಘೋಷಣೆಯಾದರೂ ಕುಂದಾಪುರವನ್ನು ಯಾಕೆ ಬರಪೀಡಿತ ಎಂದು ಪರಿಗಣಿಸಿಲ್ಲ. ಬೈಂದೂರಿನಲ್ಲಿ ಶೇ.26 ಮಳೆ ಕೊರತೆ ಎಂದು ದಾಖಲಿಸಿದ್ದು, ಕುಂದಾಪುರದಲ್ಲಿ ಶೇ.16 ಮಳೆ ಕೊರತೆ ಎಂದು ಹೇಳಲಾಗಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಂದಾಪುರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸೋಮವಾರ ನಡೆದ ಕುಂದಾಪುರ ತಾಲೂಕು ಕ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಪಡಿತರ ಚೀಟಿ ಒಟಿಪಿ ಮೂಲಕ ಇ-ಕೆವೈಸಿ ಮಾಡಲು ಪಡಿತರ ಅಂಗಡಿಗಳಿಗೆ ಅವಕಾಶ ಕೊಟ್ಟಿಲ್ಲ. ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಿಗೆ ಒಟಿಪಿ ಮೂಲಕ ಇ-ಕೆವೈಸಿ ಮಾಡಲು ಕೊಟ್ಟಿರುವುದ ರಿಂದ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆಗೂ, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಿಗೆ ಏನೋ ಹೊಂದಾಣಿಕೆ ಇದೆ ಎಂದು ಆರೋಪಿಸಿದ ಅವರು, ಪಡಿತರ ವಿತರಣಾ ಕೇಂದ್ರಗಳಿಗೆ ಒಟಿಪಿ ಮೂಲಕ ಇ-ಕೆವೈಸಿ ಮಾಡಲು ಅವಕಾಶ ಮಾಡಬೇಕು ಎಂದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿದ್ದು, ಬಗರ್ ಹುಕುಂ ಮತ್ತು ಅಕ್ರಮ ಸಕ್ರಮ ಕಮಿಟಿ ಸಭೆಯಲ್ಲಿ ಮಂಜೂರು ಮಾಡಿ ಅಪ್ಲೋಡ್ ಮಾಡಿದ ಫೈಲ್‌ಗಳು ಸಮಿತಿಯ ಮುಂದೆ ಬಂದ ಬಳಿಕ ತಹಶೀಲ್ದಾರ್ ಕಚೇರಿಗೆ ಹೋಗುತ್ತಿದ್ದರೆ, ಇದೀಗ ತಹಶೀಲ್ದಾರ್ ಕಚೇರಿಯಿಂದ ಸಮಿತಿ ಮುಂದೆ ಬರುವುದರಿಂದ ಅನೇಕ ಫೈಲ್ ಗಳು ತಿರಸ್ಕೃತಗೊಳ್ಳುತ್ತಿವೆ. ಪೋಡಿ ಮುಕ್ತ ಗ್ರಾಮ ಎನ್ನುವುದು ಕೇವಲ ಕಾಗದದಲ್ಲಿ ಮಾತ್ರ ಇದೆ, ತಾಲೂಕು ಕಚೇರಿಯಲ್ಲಿ ಮಾಡಿದ ತಪ್ಪನ್ನು ನಾವು ಸರಿಡಿಸ ಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದರು.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ರೈತರು ಬರಗಾಲದ ಗಂಭೀರತೆಯನ್ನು ಅರ್ಥ ಮಾಡಿ ಕೊಂಡು ಕುಡಿಯುವ ನೀರಿಗೆ ಸಹಕಾರ ನೀಡಬೇಕು. ಮಳೆ ಕೊರತೆ ಹಿನ್ನಲೆಯಲ್ಲಿ ವೆಂಟೆಡ್ ಡ್ಯಾಮ್‌ಗಳಿಗೆ ಹಲಗೆ ಅಳವಡಿಸುವ ಕೆಲಸವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಮುಂದಿನ ಬೇಸಿಗೆಯ ಅಪಾಯವನ್ನು ಅರಿತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಕುಂದಾಪುರ ತಾಲೂಕು ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಕೈಗೊಂಡು, ಆಸ್ಪತ್ರೆಯ ಸೌಲಭ್ಯಗಳು ಸರಿಯಾಗಿ ಸಿಗುವ ರೀತಿಯಲ್ಲಿ ಕೆಲಸ ಮಾಡುವಂತೆ ತಾಲೂಕು ಆರೋಗ್ಯ ಅಧಿಕಾರಿ ಗಳಿಗೆ ಶಾಸಕ ಕೊಡ್ಗಿ ಸೂಚನೆ ನೀಡಿದರು. ಸರಕಾರಿ ಆಸ್ಪತ್ರೆಗಳಲ್ಲಿ ಕೊರತೆ ಇರುವ ಸಿಎಚ್‌ಒ ನೇಮಕ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಳ್ಳ ಲಾಗುವುದು ಎಂದರು. ತಾಲೂಕಿನ ಎಲ್ಲಾ ಮುಖ್ಯರಸ್ತೆಗಳ ಹೊಂಡಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಅವರು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ತಿಳಿಸಿದರು.
ಕಂಡ್ಲೂರು ಸೇತುವೆ ಮೇಲೆ ಘನ ವಾಹನ ಸಂಚಾರವನ್ನು ನಿರ್ಬಂಧಿಸಿದರೆ ಸೇತುವೆ ಮತ್ತಷ್ಟು ಹಾನಿಯಾಗುವುದು ತಪ್ಪಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಸರಕಾರಿ ಶಾಲೆಗಳ ದುರಸ್ಥಿಗೆ ಪ್ರತಿ ಶಾಲೆಗೆ ಒಂದೊಂದು ಲಕ್ಷ ರೂ. ಅನುದಾನ ನೀಡಿದರೆ, ಶಾಲಾ ಕಟ್ಟಡ ರಿಪೇರಿ ಬದಲು ಖಾಲಿ ಬಿಲ್ ಮಾಡಿಸಲು ಮಾತ್ರ ಆಗುತ್ತದೆ ಬಿಟ್ಟರೆ ಬೇರೆ ಯಾವುದೇ ಕೆಲಸ ಆಗುವುದಿಲ್ಲ, ಕಳೆದ ಮೂರು ವರ್ಷಗಳಿಂದ ಹಾಸ್ಟೆಲ್ಗೆ ಬೇಡಿಕೆ ಇಟ್ಟಿದ್ದರೂ ಸರಕಾರ ಈವರೆಗೆ ಹಾಸ್ಟೆಲ್ ಮಂಜೂರು ಮಾಡಿಲ್ಲ ಎಂದು ಶಾಸಕ ಕೊಡ್ಗಿ ಹೇಳಿದರು.
ಸರ್ವರ್ ಡೌನ್‌ನಿಂದ ಎಲ್ಲಾ ಸರಕಾರಿ ಸೇವೆಗಳು ಡೌನ್ ಆಗುತ್ತಿದೆ ಎಂದು ಹೇಳಿದ ಶಾಸಕ ಗಂಟಿಹೊಳೆ, ಕೆಡಿಪಿ ಸಭೆಯಲ್ಲಿ 22 ಇಲಾಖೆಗಳು ಅನುಪಾಲನಾ ವರದಿ ನೀಡಿಲ್ಲ. ಕಳೆದ ಮೂರು ಕೆಡಿಪಿ ಸಭೆಗಳಿಗೆ ಗೈರು ಹಾಜರಾದ ಅಧಿಕಾರಿಗಳ ಮತ್ತು ಕಳೆದ ಮೂರು ಕೆಡಿಪಿ ಸಭೆಗಳಿಂದ ಅನುಪಾಲನಾ ವರದಿ ನೀಡದ ಇಲಾಖೆಗಳ ವಿವರವನ್ನು ನೀಡುವಂತೆ ಸೂಚನೆ ನೀಡಿದರು.
ಕುಂದಾಪುರ ತಹಶೀಲ್ದಾರ್ ಪ್ರದೀಪ ಕುರುಡೇಕರ್, ಕುಂದಾಪುರ ತಾಪಂ ಆಡಳಿತಾಧಿಕಾರಿ ಡಾ.ಉದಯ ಶೆಟ್ಟಿ, ಕುಂದಾಪುರ ತಾಪಂ. ಇಒ ಮಹೇಶ ಕೆ.ಜಿ. ಉಪಸ್ಥಿತರಿದ್ದರು.