ಕಾರ್ಕಳ| ಸುವರ್ಣ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು
ಕಾರ್ಕಳ, ಸೆ.29: ಹಿರ್ಗಾನ ಗ್ರಾಮದ ಹೆರ್ಮುಂಡೆಯ ಸುವರ್ಣ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಹಿರ್ಗಾನ ಗ್ರಾಮದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ(23) ಎಂದು ಗುರುತಿಸಲಾಗಿದೆ.
ಭರತ್ ಪೂಜಾರಿ ಪೈಟಿಂಗ್ ವೃತ್ತಿ ಮಾಡುತ್ತಿದ್ದರು. ಮಂಗಳವಾರ ಕೆಲಸಕ್ಕೆ ರಜೆ ಇದ್ದ ಕಾರಣ ಭರತ್, ಹರ್ಷನ್ ಸೇರಿ ಐವರು ಸ್ನೇಹಿತರು ಈಜಲು ಹೆರ್ಮುಂಡೆ ನದಿಗೆ ತೆರಳಿದ್ದರು. ಹಿರ್ಗಾನದ ಮಂಗಿಲಾರು ಎಂಬಲ್ಲಿನ ಸುಮಾರು 2 ಕಿಮೀ ದುರ್ಗಮ ದಾರಿಯಲ್ಲಿ ನಡೆದುಕೊಂಡು ಹೋಗಿದ್ದ ಇವರು, ಅಲ್ಲಿ ನದಿಯಲ್ಲಿ ಈಜುತ್ತಿದ್ದರು.
ಈ ವೇಳೆ ಸರಿಯಾಗಿ ಈಜು ಬಾರದ ಭರತ್ ಹಾಗೂ ಹರ್ಷನ್ ನದಿಯ ಆಳದಲ್ಲಿ ಮುಳುಗಿ ನೀರು ಪಾಲಾದರು ಎನ್ನಲಾಗಿದೆ. ಘಟಟಾ ಸ್ಥಳಕ್ಕೆ ವಾಹನಗಳು ತೆರಳಲು ಸರಿಯಾದ ದಾರಿಯ ವ್ಯವಸ್ಥೆ ಇಲ್ಲದ ಕಾರಣ, ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮ ರಕ್ಷಣಾ ಸಲಕರಣೆಗಳೊಂದಿಗೆ ಸುಮಾರು 3 ಕಿ.ಮೀ ದೂರ ನಡೆದುಕೊಂಡೇ ಹೋದರು.
ಬಳಿಕ ಅಗ್ನಿಶಾಮಕ ದಳದ ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದ ತಂಡ ಸ್ಥಳೀಯರ ಸಹಕಾರದೊಂದಿಗೆ ನಿರಂತರ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆ ಎತ್ತಿತ್ತು ಎಂದು ತಿಳಿದು ಬಂದಿದೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ರೂಪೇಶ್, ಸುರೇಶ, ನಿತ್ಯಾನಂದ, ದಿನೇಶ್, ಮುಝುಮ್ಮಿಲ್ ಹಾಗೂ ಚಾಲಕ ಶಿವಾನಂದ ಪಾಲ್ಗೊಂಡಿದ್ದರು.