ಕುಂದಾಪುರ, ಅ.7: ಬೈಂದೂರು ಮತ್ತು ಕುಂದಾಪುರ ಎರಡೂ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಕಂಡ್ಲೂರು ಹಳೆ ಸೇತುವೆ ವಿಚಾರದಲ್ಲಿ ಹಳೆ ಸೇತುವೆಯನ್ನು ತೆರವುಗೊಳಿಸಿದಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಬುಧವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಭೇಟಿ ಮಾಡಿ ಸಮಗ್ರ ಮಾಹಿತಿ ನೀಡಿ, ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಸಿದರು.

ಕಂಡ್ಲೂರು ಹಳೆ ಸೇತುವೆಯು ರಾಜ್ಯ ಹೆದ್ದಾರಿಯ ಪ್ರಮುಖ ಮಾರ್ಗವಾಗಿದ್ದು, ಈ ಮಾರ್ಗದ ಮೂಲಕ ಸಾವಿರಾರು ಜನರು ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಾರೆ. ಮೀನುಗಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ದಿನನಿತ್ಯ ಈ ಸೇತುವೆಯನ್ನು ಅವಲಂಬಿಸಿದ್ದಾರೆ.

ಒಂದು ವೇಳೆ ಹಳೆ ಸೇತುವೆಯನ್ನು ಈಗಲೇ ಕೆಡವಿದರೆ, ಹೊಸ ಸೇತುವೆ ನಿರ್ಮಾಣ ಪೂರ್ಣಗೊಳ್ಳುವವರೆಗೂ ಜನರು 15-20ಕಿ.ಮೀ. ಸುತ್ತುವರೆದು ಹೋಗಬೇಕಾಗುತ್ತದೆ. ಇದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ. ಆದುದರಿಂದ ಹಳೆ ಸೇತುವೆಯನ್ನು ಯಥಾಸ್ಥಿತಿ ಉಳಿಸಿಕೊಂಡು, ಅದರ ಪಕ್ಕದಲ್ಲಿಯೇ ಸಮಾನಾಂತರವಾಗಿ ಹೊಸ ಸೇತುವೆ ನಿರ್ಮಾಣ ಮಾಡಬೇಕು. ಹೊಸ ಸೇತುವೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾದ ನಂತರವೇ ಹಳೆ ಸೇತುವೆ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಜಿಲ್ಲಾಧಿಕಾರಿಗಳಿಗೆ ಶಾಸಕರು ತಿಳಿಸಿದರು.

ಜಿಲ್ಲಾಧಿಕಾರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor