ಹೊಸಂಗಡಿ| ಯುವಕ ಅನುಮಾನಾಸ್ಪದ ಸಾವು ಪ್ರಕರಣ; ತೋಟದ ವಿದ್ಯುತ್ ತಂತಿ ತಗುಲಿ ಮೃತ್ಯು
ಸಾವು ಮರೆಮಾಚಿದ್ದ ಮಾಲಕನ ಬಂಧನ
ಅಮಾಸೆಬೈಲು: ಹೊಸಂಗಡಿಯ ಮಾತಿನಮಠ ಎಂಬಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಹೊಸಂಗಡಿ ತಾರ್ಕಿ ಮಕ್ಕಿ ನಿವಾಸಿ ಕವೀನಾ ನಾಯ್ಕ್(26) ಎಂಬವರ ಸಾವಿನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ತೋಟಕ್ಕೆ ಅಳವಡಿಸಿದ ಅಕ್ರಮ ವಿದ್ಯುತ್ ತಂತಿಯ ಆಘಾತದಿಂದ ಮೃತಪಟ್ಟಿರುವುದು ತನಿಖೆಯಿಂದ ತಿಳಿದು ಬಂದಿದೆ.
ಈ ಸಂಬಂಧ ಸಾವಿನ ಪ್ರಕರಣವನ್ನು ಮರೆಮಾಚಿದ್ದ ತೋಟದ ಮಾಲಕ ಶೇಖರ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಟಿಪ್ಪರ್ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದ ಕವೀನಾ ನಾಯ್ಕ್ ಸೆ.2ರಿಂದ ನಾಪತ್ತೆಯಾಗಿರುವ ಬಗ್ಗೆ ಅವರ ಸಹೋದರ ಪ್ರವೀಣ್ ನಾಯ್ಕ್ ಅ.2ರಂದು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಅ.5ರಂದು ಕವೀನಾ ಮೃತದೇಹವು ಮಾತಿನಮಠ ಎಂಬಲ್ಲಿ ಖಾಸಗಿ ಜಾಗವೊಂದರಲ್ಲಿ ಪತ್ತೆಯಾಗಿತ್ತು.
ಮೃತದೇಹ ಅಂಗಾಂತನೇ ಬಿದ್ದು, ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡುಬಂದಿದ್ದು, ಮೃತದೇಹ ಸಿಕ್ಕ ಸ್ಥಳ ಅವರ ಮನೆಗೆ ಹೋಗುವ ದಾರಿ ಆಗಿರಲಿಲ್ಲ ಮತ್ತು ಮೃತರ ಕಾಲಿನಲ್ಲಿ ಚಪ್ಪಲಿ ಇರಲಿಲ್ಲ ಎಂಬುದು ಸಂಶಯಕ್ಕೆ ಕಾರಣ ವಾಗಿತ್ತು. ಅದೇ ರೀತಿ ಈ ಸ್ಥಳದಲ್ಲಿ ಕಾಲಿನ ಚಪ್ಪಲಿ ಕೂಡ ದೊರೆತಿರಲಿಲ್ಲ. ಆದುದರಿಂದ ಕವೀನಾ ಸಾವಿನಲ್ಲಿ ಬಗ್ಗೆ ಸಂಶಯ ಇರುವುದಾಗಿ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಅಮಾಸೆಬೈಲು ಪೊಲೀಸರು, ತನಿಖೆ ತೀವ್ರಗೊಳಿಸಿದರು.
ಅಕ್ರಮ ವಿದ್ಯುತ್ ಸಂಪರ್ಕ: ಪೊಲೀಸರು ತನಿಖೆ ನಡೆಸಿದಾಗ ಕವೀನಾ ತಂತಿ ಬೇಲಿಗೆ ನೀಡಿದ ಕರೆಂಟ್ ತಾಗಿ ಶಾಕ್‌ನಿಂದಾಗಿ ಮೃತ ಪಟ್ಟಿರುವುದು ತಿಳಿದುಬಂದಿದೆ. ಮಾತಿನ ಮಠದ ಶೇಖರ ನಾಯ್ಕ ಎಂಬಾತ ಕಾಡು ಪ್ರಾಣಿಗಳಿಂದ ತಮ್ಮ ಕೃಷಿ ರಕ್ಷಣೆಗೆ ತೋಟದ ಸುತ್ತಲಿರುವ ತಂತಿ ಬೇಲಿಗೆ ಮನೆಯ ಕರೆಂಟ್ ಕಳ್ಳತನ ಮಾಡಿ ಅಕ್ರಮವಾಗಿ ಸಂಪರ್ಕ ನೀಡಿದ್ದನು.
ಅ.2ರ ಸಂಜೆ ವೇಳೆ ಸಂಬಂಧಿಕರಿಗೆ ಹಣದ ಅವಶ್ಯಕತೆ ಇರುವುದನ್ನು ತಿಳಿದುಕೊಂಡ ಕವೀನಾ, ಹಣ ನೀಡಲು ಶೇಖರ್ ನಾಯ್ಕ ತೋಟದ ಮೂಲಕ ಅವರ ಮನೆಗೆ ಹೋಗಿದ್ದರು. ಆಗ ತೋಟದಲ್ಲಿದ್ದ ತಂತಿ ಬೇಲಿಗೆ ನೀಡಿದ ಕರೆಂಟ್ ತಾಗಿ ಕವೀನಾ ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಮೃತದೇಹ ನೋಡಿದ ಶೇಖರ ನಾಯ್ಕ, ಕವೀನಾನ ಮೃತದೇಹದ ಅಡಿಯಲ್ಲಿರುವ ಬೇಲಿಯ ಎರಡು ತಂತಿಯನ್ನು ತುಂಡು ಮಾಡಿ ಪಕ್ಕದಲ್ಲಿರುವ ಕಂಬಗಳಿಗೆ ಸುತ್ತಿ ಇಟ್ಟಿದ್ದು ಈ ಸಾವು ಕರೆಂಟ್ ಶಾಕ್‌ನಿಂದಾಗಿ ಅಗಿದ್ದನ್ನು ಮರೆಮಾಚಿ ಕವೀನಾ ಮನೆಯವರಿಗೆ ತಿಳಿಸಿದ್ದನು.
ಆರೋಪಿ ಶೇಖರ್ ನಾಯ್ಕ್, ಮನೆಗೆ ನೀಡಿದ ವಿದ್ಯುತ್‌ನ್ನು ಅಕ್ರಮವಾಗಿ ತೋಟದ ತಂತಿ ಬೇಲಿಗೆ ನೇರವಾಗಿ ಸಂಪರ್ಕ ನೀಡಿ ನಿರ್ಲಕ್ಷತನ ವಹಿಸಿರುವುದಲ್ಲದೆ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕವೀನಾ ಅವರ ಸಾವಿನ ಕಾರಣವನ್ನು ಮರೆ ಮಾಚಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಆ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.