ಉಡುಪಿ ಧರ್ಮಪ್ರಾಂತ್ಯದ ಮೂವರು ಉಪಯಾಜಕರಿಗೆ ಗುರುದೀಕ್ಷೆ ಪದವಿ ಪ್ರದಾನ
ಉಡುಪಿ, ಅ.21: ಉಡುಪಿ ಧರ್ಮಪ್ರಾಂತದ ಮೂವರು ಉಪ ಯಾಜಕರಿಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಬುಧವಾರ ಗುರು ದೀಕ್ಷೆಯನ್ನು ಪ್ರದಾನಿಸಲಾಯಿತು.
ಪಡುಕೋಣೆಯ ಕೆವಿನ್ ಡಿಸೋಜ, ನಿಡ್ಪಳ್ಳಿಯ ಸ್ವೀವನ್ ಡಿಸೋಜ ಹಾಗೂ ಕೆಮ್ಮಣ್ಣುವಿನ ಶೊನ್ ಸಾವಿಯೋ ಅಂದ್ರಾದೆ ಅವರುಗಳಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಲೆಸ್ಲಿ ಕ್ಲಿಫರ್ಡ್ ಡಿಸೋಜ ನೂತನ ಧರ್ಮಗುರುಗಳಾಗಿ ಅಭಿಷಿಕ್ತಗೊಳಿಸಿದರು.
ಸಂಭ್ರಮದ ಬಲಿಪೂಜೆಯಲ್ಲಿ ಪವಿತ್ರಾತ್ಮನ ಆಗಮನಕ್ಕಾಗಿ ಧರ್ಮಾಧ್ಯಕ್ಷರ ಜೊತೆ ಸೇರಿದ ಎಲ್ಲಾ ಧರ್ಮಗುರು ಗಳೂ ತಮ್ಮ ಕರಗಳನ್ನು ನವ ಧರ್ಮಗುರುಗಳ ಅಭ್ಯರ್ಥಿಯ ಶಿರದ ಮೇಲಿಟ್ಟು ಪ್ರಾರ್ಥಿಸಿದರು. ನಂತರ ಕ್ರೈಸ್ತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನವ ಧರ್ಮಗುರುಗಳ ಕರಗಳನ್ನು ಪವಿತ್ರ ತೈಲಗಳಿಂದ ಅಭಿಷಿಕ್ತಗೊಳಿಸಿದರು.
ತಮ್ಮ ಸಂದೇಶದಲ್ಲಿ ಬಿಷಪ್ ಲೆಸ್ಲಿ ಡಿಸೋಜ ಮಾತನಾಡಿ, ದೇವಜನರ ಸೇವೆಗಾಗಿ ದೇವರ ಎದುರು ನಮ್ಮನ್ನು ನಾವು ವಿನಮ್ರ ಗೊಳಿಸುವುದೇ ನೈಜ ನಾಯಕತ್ವ. ಕ್ರೈಸ್ತ ಧರ್ಮಗುರುವಿನ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಪ್ರಾಂತಕ್ಕೆ ಹೊಸ ಧರ್ಮಗುರು ವನ್ನು ನೀಡಿದ ಕುಟುಂಬ ವರ್ಗವನ್ನು ಶ್ಲಾಘಿಸಿದರು. ಕ್ರೈಸ್ತ ಕುಟುಂಬಗಳಿಂದ ಹೆಚ್ಚಿನ ಯುವಕರು ಧರ್ಮಗುರುಗಳಾಗಲು ಮುಂದೆ ಬರುವಂತೆ ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಲು ಪೋಷಕರಿಗೆ ಕರೆ ನೀಡಿದರು.
ನೂತನವಾಗಿ ದೀಕ್ಷೆ ಪಡೆದ ಉಪಯಾಜಕರು ಪ್ರಥಮ ಬಾರಿಗೆ ಬಲಿಪೀಠದ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭಕ್ತಾದಿಗಳಿಗೆ ದಿವ್ಯ ಪ್ರಸಾದವನ್ನು ವಿತರಿಸಿದರು. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್.ಲೂವಿಸ್, ಕುಲಪತಿ ವಂ.ಸ್ಟೀವನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಶಿರ್ವ, ಕಾರ್ಕಳ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ವಂ.ಆಲ್ಬನ್ ಡಿಸೋಜ, ವಂ.ಪಾವ್ಲ್ ರೇಗೊ, ಮಂಗಳೂರು ಗುರುಮಠದ ರೆಕ್ಟರ್ ವಂ.ರಾಜೇಶ್ ರೊಸಾರಿಯೊ ವಿವಿಧ ಚರ್ಚುಗಳ ಧರ್ಮಗುರುಗಳು ಉಪಸ್ಥಿತರಿದ್ದರು.
ಗುರುದೀಕ್ಷೆಯ ಪವಿತ್ರ ಬಲಿಪೂಜೆಯ ಬಳಿಕ ನೂತನ ಧರ್ಮಗುರುಗಳಿಗೆ ಧರ್ಮಪ್ರಾಂತ್ಯದ ಪರವಾಗಿ ಅಭಿನಂದಿಸ ಲಾಯಿತು. ವಂ.ವಿಲ್ಸನ್ ಡಿಸೋಜ ಗುರು ದೀಕ್ಷೆಯ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮ ನಿರೂಪಿಸಿದರು. ವಂ.ಸ್ಟೀಫನ್ ರೊಡ್ರಿಗಸ್ ನೂತನ ಧರ್ಮಗುರುಗಳ ಪರಿಚಯ ಮಾಡಿದರು. ವಂ.ಸ್ಟೀವನ್ ಡಿಸೋಜ ವಂದಿಸಿದರು.