ಅ.25: ಉಡುಪಿಯಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ
ಉಡುಪಿ, ಅ.21: ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘಗಳ ಜಂಟಿ ಸಹಯೋಗದಲ್ಲಿ ಪರ್ಯಾಯ ಶ್ರೀಶಿರೂರು ಮಠದ ಆಶ್ರಯದಲ್ಲಿ ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ ಹಾಗೂ ಕಾರ್ಯಾಗಾರವು ಅ.25ರ ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ವೆಂಕಟೇಶ್ ಹೇಳಿದ್ದಾರೆ.
ಉಡುಪಿ ಪ್ರೆಸ್ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಉಡುಪಿಯಲ್ಲಿ ಹಿಂದಿ ಭಾಷಾ ಶಿಕ್ಷಕರ ಸಮ್ಮೇಳನ ಮೊದಲ ಬಾರಿಗೆ ನಡೆಯುತ್ತಿದೆ. ಸಮ್ಮೇಳನದಲ್ಲಿ ಮೂರು ವಿಚಾರಗೋಷ್ಠಿಗಳು ನಡೆಯಲಿದ್ದು, ಜಿಲ್ಲಾ ನಿವೃತ್ತ ಹಿಂದಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದರು.
ಸಮ್ಮೇಳನವನ್ನು ರವಿವಾರ ಬೆಳಗ್ಗೆ 9:30ಕ್ಕೆ ಪರ್ಯಾಯ ಶಿರೂರು ಮಠದ ದಿವಾನರಾದ ಡಾ.ಉದಯಕುಮಾರ್ ಸರಳತ್ತಾಯ ಅವರು ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಶಶಿಧರ ಸಿಎಂ. ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಿದ್ದಾರೆ. ಸಂಘದ ಗೌರವಾಧ್ಯಕ್ಷ ಡಿ.ಎಂ. ರಾಠೋಡ್, ಡಿಡಿಪಿಐ ಲೋಕೇಶ್ ಸಿ., ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಅಭಿವೃದ್ಧಿ) ಡಾ.ಅಶೋಕ ಕಾಮತ್, ಜಿಲ್ಲಾ ಸಂಘದ ಸ್ಥಾಪಕ ಅಧ್ಯಕ್ಷ ದಿನಕರ ಶೆಟ್ಟಿ ಉಪಸ್ಥಿತರಿರುವರು.
ಬಳಿಕ ಭಾವೈಕ್ಯತೆಗಾಗಿ ಭಾಷೆಗಳ ಕೊಡುಗೆ ವಿಷಯದ ಕುರಿತು ವಿಚಾರ ಗೋಷ್ಠಿ ಡಾ.ಅಶೋಕ್ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಡಾ. ಗಣನಾಥ ಎಕ್ಕಾರು, ಪ್ರಭಾಕರ ಶೆಟ್ಟಿ ಕೊಂಡಳ್ಳಿ, ರೋಬೋಟ್ ಮ್ಯಾನೇಜ್ವ, ಮಕದಂರ್ ಎ.ಎಸ್., ಜಿಎಂ ಗುರುಮೂರ್ತಿ ಭಾಗವಹಿಸಲಿದ್ದಾರೆ.
ತೃತೀಯ ಭಾಷೆಯ ಮಹಗತ್ವದ ಕುರಿತು ಮತ್ತೊಂದು ಗೋಷ್ಠಿ ನಡೆಯಲಿದೆ. ಜಿಲ್ಲಾ ನಿವೃತ್ತ ಶಿಕ್ಷಕರಿಗೆ ಸನ್ಮಾನವೂ ನಡೆಯಲಿದ್ದು, ಅಪರಾಹ್ನ 1:30ರಿಂದ 2:30ರವರೆಗೆ ಸಾಂಸ್ಕೃತಿಕ ವೈಭವದಲ್ಲಿ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಅಪರಾಹ್ನ 2:30ರಿಂದ ಸಮಾರೋಪ ಸಮಾರಂಭ ಶಾಸಕ ಯಶಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪರ್ಯಾಯ ಶ್ರೀಗಳಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸಚಿವ ಯು.ಟಿ. ಖಾದರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪ್ರದಾನ ಕಾರ್ಯದರ್ಶಿ ಕೃಷ್ಣನಾಯಕ್, ಉಪಾಧ್ಯಕ್ಷೆ ರೋಮಿಲಾ, ರಾಜ್ಯ ಸಂಚಾಲಕ ಡಾ.ವಿನೋದಕುಮಾರ್ ಚೌಹಾಣ್, ಬ್ರಹ್ಮಾವರ ವಲಯ ಅಧ್ಯಕ್ಷೆ ಸುಲೋಚನ ಉಪಸ್ಥಿತರಿದ್ದರು.