ಆರ್ಗೋಡು ಮೋಹನದಾಸ ಶೆಣೈ

ಉಡುಪಿ, ಅ.21: ಪರ್ಯಾಯ ಶಿರೂರು ಮಠ, ಶ್ರೀಕೃಷ್ಣಮಠದ ಆಶ್ರಯದಲ್ಲಿ ಗುರು ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅ.24ರ ಶನಿವಾರ ‘ಮೋಹನಾಮೃತ- 75’ (ಯಕ್ಷಗಾನ, ಸನ್ಮಾನ, ಅಭಿವಂದನ) ಕಾರ್ಯಕ್ರಮ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರಾತ್ರಿ 9:30ರಿಂದ ಮರುದಿನ ಮುಂಜಾನೆ 5:30ರವರೆಗೆ ನಡೆಯಲಿದೆ.

ರಾತ್ರಿ 9:30ಕ್ಕೆ ನಡೆಯುವ ಸಮಾರಂಭದಲ್ಲಿ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಯಕ್ಷಗಾನ ಕಲಾವಿದ ಆರ್ಗೋಡು ಅವರನ್ನು ಸನ್ಮಾನಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ನಾಡೋಜ ಡಾ.ಜಿ.ಶಂಕರ್ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಹೈದರಾಬಾದಿನ ಉದ್ಯಮಿ ಕೃಷ್ಣಮೂರ್ತಿ ಮಂಜ, ಶ್ರೀಕ್ಷೇತ್ರ ಸೌಕೂರು ಧರ್ಮದರ್ಶಿ ಕಿಶನ್ ಕುಮಾರ್ ಹೆಗ್ಡೆ, ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಾಸುದೇವ ಕಾಮತ್, ಉದ್ಯಮಿ ಗೋಪಿನಾಥ್ ಕಾಮತ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಅನಾಮಯ ಚಿಕಿತ್ಸಾಲಯದ ಡಾ. ಚಂದ್ರಶೇಖರ ರಾವ್, ಬೆಳ್ವೆಯ ಉದ್ಯಮಿ ಬೆಳ್ವೆ ಗಣೇಶ್ ಕಿಣಿ, ನ್ಯಾಯವಾದಿ ಪ್ರವೀಣ ಎಂ. ಪೂಜಾರಿ, ಉದ್ಯಮಿ ಮಂಜುನಾಥ, ಉದ್ಯಮಿ ಹರಿಪ್ರಸಾದ್ ರೈ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ. ಸಿದ್ಧಾಪುರದ ಡಾ.ಜಗದೀಶ್ ಶೆಟ್ಟಿ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಗೌರವಾರ್ಪಣೆ: ಇದೇ ಸಂದರ್ಭದಲ್ಲಿ ಒಡನಾಡಿ ಹಿರಿಯ ಕಲಾವಿದ ಹಾಗೂ ಭಾಗವತ ಕುರಿಯ ಗಣಪತಿ ಶಾಸ್ತ್ರಿ, ಹಿರಿಯ ಹಾಸ್ಯ ಕಲಾವಿದ ಮಹಾಬಲ ದೇವಾಡಿಗ ಕಮಲಶಿಲೆ, ಹಿರಿಯ ಸ್ತ್ರೀ ವೇಷಧಾರಿ ಸಂಜೀವ ಬಳೆಗಾರ, ಹಿರಿಯ ಕಲಾವಿದ ಗಾವಳಿ ಶೀನ ಕುಲಾಲ್ ಅವರನ್ನು ಗೌರವಿಸಲಾಗುವುದು.

ಶ್ರೀಮನ್ಮಹಾಭಾರತ ಯಕ್ಷಗಾನ ಪ್ರದರ್ಶನ: ಬಳಿಕ ರಾಜಾಂಗಣದಲ್ಲಿ ರಾತ್ರಿ 10:15ರಿಂದ ಬೆಳಗಿನ ಜಾವ 5:30ರವರೆಗೆ ತೆಂಕು ಹಾಗೂ ಬಡಗು ತಿಟ್ಟುಗಳ ದಿಗ್ಗಜ ಕಲಾವಿದರಿಂದ ಶ್ರೀಮನ್ಮಹಾಭಾರತ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಆರ್ಗೋಡು: 42ವರ್ಷಗಳ ವೃತ್ತಿ ಜೀವನ

ಕಮಲಶಿಲೆಯ ಆರ್ಗೋಡು ಮೋಹನದಾಸ್ ಶೆಣೈ 42 ವರ್ಷಗಳ ವೃತ್ತಿ ಜೀವನದಲ್ಲಿ ಹಿರಿಯಡಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟಾ, ಅಮೃತೇಶ್ವರಿ, ಕಮಲಶಿಲೆ ಮೇಳಗಳಲ್ಲಿ ಸುಧನ್ವ, ದಶರಥ, ಭೀಷ್ಮ, ಶ್ರೀರಾಮ, ಪರಶುರಾಮ ಸಹಿತ ಅನೇಕಾನೇಕ ಪಾತ್ರ ಮಾಡಿದ್ದಾರೆ. ಐದು ಯಕ್ಷಗಾನ ಪ್ರಸಂಗ, ಇನ್ನೂ ಕೆಲ ಪ್ರಸಂಗಗಳಿಗೆ ಅರ್ಥ ಬರೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಸಾವಿರಾರು ಸಮ್ಮಾನ ಪುರಸ್ಕಾರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor