ಮುಂದುವರಿದ ಅಗ್ರಿಗೋಲ್ಡ್ ಸಂತ್ರಸ್ತರ ದಾಖಲೆ ಪರಿಶೀಲನೆ; ಹೆಬ್ರಿ ತಾಲೂಕಿನ ಗ್ರಾಹಕರು ಹಾಜರು
ಉಡುಪಿ : ಅಗ್ರಿಗೋಲ್ಡ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ಸಿಐಡಿ ಅಧಿಕಾರಿಗಳು, ಸಂತ್ರಸ್ತರ ದಾಖಲೆ ಪರಿಶೀಲನೆ ಕಾರ್ಯವನ್ನು ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸ್ಥಾಪಿಸಲಾದ ವಿಶೇಷ ಬಾಂಡ್ ಪರಿಶೀಲನಾ ಕೇಂದ್ರಗಳಲ್ಲಿ ಮುಂದುವರೆದಿದ್ದು, ಗುರುವಾರ ಹೆಬ್ರಿ ತಾಲೂಕಿನ ಗ್ರಾಹಕರ ದಾಖಲೆ ಪರಿಶೀಲನೆ ಕಾರ್ಯ ನಡೆಯಿತು.
ಬುಧವಾರ ನಿಗದಿ ಪಡಿಸಿದ 150 ಟೋಕನ್ ಸಂಖ್ಯೆಗಿಂತ ಮೀರಿದ ಗ್ರಾಹಕರು ಆಗಮಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲಗಳು ಸೃಷ್ಠಿಯಾಗಿದ್ದವು. ಆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಪ್ರಕಟಣೆ ಹೊರಡಿಸಿ ಅ.29ರಂದು ಹೆಬ್ರಿ ತಾಲೂಕಿನ ಎಲ್ಲಾ ಗ್ರಾಮಗಳ, ಅ.30ರಂದು ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ ಮತ್ತು ಅ.31ರಂದು ಅಜೆಕಾರು ಹಾಗೂ ಆಸುಪಾಸಿನ ಗ್ರಾಮಗಳ ಗ್ರಾಹಕರಿಗೆ ಟೋಕನ್ ನೀಡು ವುದಾಗಿ ತಿಳಿಸಿತ್ತು.
ಅದರಂತೆ ಇಂದು ಬೆಳಗ್ಗೆ 8ಗಂಟೆಯಿಂದಲೇ ಹೆಬ್ರಿ ತಾಲೂಕಿನ ಗ್ರಾಹಕರು ಟೋಕನ್ ಪಡೆಯಲು ಎಸ್ಪಿ ಕಚೇರಿ ಮುಂದೆ ಜಮಾಯಿಸಿದರು. ದಿನಕ್ಕೆ ಕೇವಲ 150 ಮಂದಿಗೆ ಮಾತ್ರ ಟೋಕನ್ ನೀಡಲು ಅವಕಾಶ ಇದ್ದರೂ ಸ್ಥಳದಲ್ಲಿ 500ಕ್ಕೂ ಅಧಿಕ ಸಂತ್ರಸ್ತರು ನೆರೆದಿದ್ದರು. ಇದರಿಂದ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ಮಧ್ಯೆ ಇಂದು 150 ಮಂದಿಗೆ ಟೋಕನ್ ನೀಡಿ, ಅವರ ದಾಖಲೆ ಪರಿಶೀಲನೆ ಕಾರ್ಯ ಪೂರ್ಣಗೊಳಿಸಲಾ ಯಿತು. ಆದರೆ ಹೆಬ್ರಿ ತಾಲೂಕಿ ನಿಂದ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂತ್ರಸ್ತರು ಆಗಮಿಸಿರುವುದರಿಂದ ಮತ್ತೆ 150 ಮಂದಿಗೆ ಟೋಕನ್ ನೀಡಿ, ಅ.30ರಂದು ಹಾಜರಾಗುವಂತೆ ಸೂಚಿಸ ಲಾಯಿತು. ಇದರಿಂದ ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದಂತೆ ಅ.30 ರಂದು ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ ಗ್ರಾಹಕರಿಗೆ ನೀಡಿರುವ ಅವಕಾಶವನ್ನು ಮುಂದೂಡಲಾಗಿದೆ.
‘ಅ.30ರಂದು ಹಾಜರಾಗಲು ಹೆಬ್ರಿ ತಾಲೂಕಿನ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ 150 ಗ್ರಾಹಕರಿಗೆ ಈಗಾಗಲೇ ಟೋಕನ್ ನೀಡಲಾಗಿದ್ದು ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆ ಅವಧಿಯಲ್ಲಿ ದೂರಾವಣಿ ಸಂಖ್ಯೆ: 0820-2526444ನ್ನು ಸಂಪರ್ಕಿಸಬಹುದು’ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.