ನವೆಂಬರ್ 3ನೇ ವಾರ ಬೆಂಗಳೂರು - ಕಾರವಾರ ವಂದೇಭಾರತ್ ರೈಲು ಓಡಾಟ
ಸಂಸದ ಕೋಟರಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ
ಉಡುಪಿ, ಅ.29: ಬೆಂಗಳೂರಿನಿಂದ ಮಂಗಳೂರು, ಉಡುಪಿ ಮಾರ್ಗವಾಗಿ ಕಾರವಾರ, ಮಡಗಾಂವ್‌ವರೆಗೆ ಸಂಚರಿಸಲಿರುವ ಬಹು ನಿರೀಕ್ಷಿತ ವಂದೇಭಾರತ್ ರೈಲನ್ನು ನವೆಂಬರ್ ಮೂರನೇ ವಾರದೊಳಗೆ ಮಂಗಳೂರಿಗೆ ಬಂದು ಚಾಲನೆ ನೀಡುವುದಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ.
ಹೊಸದಿಲ್ಲಿಯ ರೈಲ್ವೆ ಭವನದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ವೇಳೆ ಅಶ್ವಿನಿ ವೈಷ್ಣವ್ ಅವರು ವಿಷಯ ತಿಳಿಸಿದ್ದಾಗಿ ಸಂಸದ ಕೋಟ ಅವರು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜಧಾನಿ ಬೆಂಗಳೂರನ್ನು ಕರಾವಳಿ ಮೂಲಕ ಸಂಪರ್ಕಿಸುವ ವಂದೇಭಾರತ್ ರೈಲನ್ನು ಘೋಷಿಸಿ ಕರಾವಳಿಯ ರೈಲ್ವೆ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಕೋಟ ಅವರು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.
ಕೊಂಕಣ ರೈಲ್ವೆ ವಿಲೀನಕ್ಕೆ ಬೆಂಬಲ: ಕೊಂಕಣ ರೈಲ್ವೆ ಮಾರ್ಗ ದ್ವಿಪಥ ಗೊಳಿಸದೆ ಮತ್ತು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡದಿರಲು ಮುಖ್ಯ ಕಾರಣ ಕೊಂಕಣ ರೈಲ್ವೆ ನಿಗಮದಲ್ಲಿ ಆರ್ಥಿಕ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ, ಗೋವಾ ಕರ್ನಾಟಕ, ಮಹಾರಾಷ್ಟ್ರ ಸರಕಾರಗಳ ಜೊತೆ ಮಾತುಕತೆ ನಡೆಸಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಡನೆ ವಿಲೀನಗೊಳಿಸಲು ಕೇಂದ್ರ ಮಧ್ಯಪ್ರವೇಶಿಸಬೇಕೆಂದು ಅವರು ಸಚಿವರನ್ನು ವಿನಂತಿಸಿದರು.
ಈ ಬಗ್ಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಸಹಕಾರ ನೀಡುವ ಬಗ್ಗೆ ಸಹಮತ ವ್ಯಕ್ತಪಡಿಸಿರು ವುದನ್ನು ಕೇಂದ್ರ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ವೈಷ್ಣವ್ ಮತ್ತು ಸೋಮಣ್ಣ ವಿಲೀನ ಪ್ರಕ್ರಿಯೆ ಕುರಿತು ವಿಶೇಷ ಗಮನ ಹರಿಸುವುದಾಗಿ ತಿಳಿಸಿದರು ಎಂದು ಕೋಟ ಮಾಹಿತಿ ನೀಡಿದರು.
ಚಿಕ್ಕಮಗಳೂರು- ಬೆಂಗಳೂರು ಇಂಟರ್ ಸಿಟಿ: ಚಿಕ್ಕಮಗಳೂರಿನಿಂದ ಬೆಂಗಳೂರು ರೈಲ್ವೆ ಪ್ರಯಾಣಿಕರ ಬೇಡಿಕೆ ಯಂತೆ ದಿನನಿತ್ಯ ಇಂಟರ್ ಸಿಟಿ ರೈಲ್ವೆಗೆ ಚಾಲನೆ ಕೊಡಬೇಕೆಂಬ ಸಂಸದ ಕೋಟ ಅವರ ಬೇಡಿಕೆಗೆ ಕೂಡಲೇ ಕ್ರಮ ಜರುಗಿಸುವುದಾಗಿ ರೈಲ್ವೆ ಸಚಿವರು ತಿಳಿದರು. ಚಿಕ್ಕಮಗಳೂರು ಜಿಲ್ಲೆಯ ವಿವಿಧ ನಿಲ್ದಾಣಗಳಲ್ಲಿ ನಡೆಯು ತ್ತಿರುವ ಅಂಡರ್ ಪಾಸ್ ಮತ್ತು ಮೇಲ್ಸೇತುವೆ ಕಾಮಗಾರಿಗಳನ್ನು ಬೇಗನೆ ಪೂರೈಸುವಂತೆ ಇದೇ ಸಂದರ್ಭದಲ್ಲಿ ಕೋಟ ಸಚಿವರಿಬ್ಬರಿಗೂ ಮನವಿ ಮಾಡಿದರು.