ಗಾಯಕಿ ಅಶ್ವಿನಿ ಕೊರಗ ನಿಧನ
ಬ್ರಹ್ಮಾವರ, ಅ.31: ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೊರಗ ಸಮುದಾಯದ ಪ್ರತಿಭಾನ್ವಿತ ಯುವತಿ, ಗಾಯಕಿ ಅಶ್ವಿನಿ (33) ಚಿಕಿತ್ಸೆ ಫಲಕಾರಿಯಾಗದೆ ಬ್ರಹ್ಮಾವರದ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು.
ತಲೆನೋವು, ಜ್ವರದಿಂದ ಬಳಲುತ್ತಿದ್ದ ಅವರನ್ನು ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗು ತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತರಾಗಿದ್ದಾರೆ. ಹುಭಾಷಿಕಾ ಕೊರಗರ ಕಲಾ ವೇದಿಕೆ ಅಧ್ಯಕ್ಷರು, ಕೊರಗ ಸಮುದಾಯದ ಮುಖಂಡರಾಗಿರುವ ಗಣೇಶ್ ಬಾರ್ಕೂರು, ಅನಿತಾ ದಂಪತಿಯ ಪ್ರಥಮ ಪುತ್ರಿಯಾದ ಅಶ್ವಿನಿ ಕಲಾಸಕ್ತೆಯಾಗಿದ್ದು ಕಾರ್ಯಕ್ರಮ ನಿರೂಪಣೆ, ಹಾಡುಗಾರಿಕೆಯಲ್ಲಿ ನಿಷ್ಣಾತರಾಗಿದ್ದರು.
ಕೊರಗ ಸಮುದಾಯದ ಮಕ್ಕಳ ಓದುವಿಕೆಗಾಗಿ ಕುಂಭಾಸಿಯಲ್ಲಿ ರೂಪಿಸಿದ್ದ ‘ಮಕ್ಕಳ ಮನೆ’ಯಲ್ಲಿ ತಮ್ಮ ಬಿಡುವಿನ ವೇಳೆ ವಿದ್ಯಾರ್ಥಿಗಳಿಗೆ ಸಂಗೀತ ಪಾಠ, ನೃತ್ಯ ಕಲಿಸುತ್ತಿದ್ದರಲ್ಲದೆ ಅಲ್ಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ತಮ್ಮನನು ತೊಡಗಿಸಿಕೊಳ್ಳುತ್ತಿದ್ದರು.
ಅಶ್ವಿನಿ ಅವರು ಪತಿ, ಒಂದು ವರ್ಷ ಮೂರು ತಿಂಗಳ ಪುಟ್ಟ ಮಗು, ಹೆತ್ತವರು ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮನೆ ಸಮೀಪ ಶನಿವಾರ ಸಂಜೆ ವೇಳೆ ನಡೆದಿದೆ ಎಂದು ತಿಳಿದುಬಂದಿದೆ.