ಬಾರಕೂರಿನ ಹಲವು ಪ್ರದೇಶಗಳಿಗೆ ಪಾರಂಪರಿಕ ಸ್ಥಾನ ನೀಡಲು ಪ್ರಯತ್ನ: ಸಚಿವ ರಿಝ್ವಾನ್ ಅರ್ಷದ್
ಬ್ರಹ್ಮಾವರ, ನ.1: ಉಡುಪಿ ಜಿಲ್ಲೆಯಲ್ಲಿರುವ ಹಲವು ಪುರತಾನ ಕಾಲದ ಪಾರಂಪರಿಕ ಆಸ್ತಿಗಳನ್ನು ಇನ್ನು ಗುರುತಿಸಿಲ್ಲ. ಈ ಪ್ರದೇಶಗಳನ್ನು ಅಭಿವೃದ್ಧಿ ಮಾಡಬೇಕಾದರೆ ಮೊದಲು ಇದನ್ನು ಪಾರಂಪರಿಕ ಆಸ್ತಿ ಎಂಬುದಾಗಿ ಘೋಷಿಸಬೇಕು. ಅದು ಈವರೆಗೆ ಯಾಕೆ ಮಾಡಿಲ್ಲ ಎಂಬುದು ಅರ್ಥ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡಲಾಗುವುದು ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಸೂರಾಲು ಮಣ್ಣಿನ ಅರಮನೆ ಮತ್ತು ಬಾರಕೂರು ಶ್ರೀಪಂಚಲಿಂಗೇಶ್ವರ ದೇವಸ್ಥಾನಕ್ಕೆ ರವಿವಾರ ಭೇಟಿ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.
ಬಾರಕೂರಿನಲ್ಲಿರುವ ಪುರಾತನ ಕಾಲದ ಹಲವು ಕಟ್ಟಡ ಉಳಿಸಲು ಅವುಗಳನ್ನು ಪಾರಂಪರಿಕ ಆಸ್ತಿಯಾಗಿ ಘೋಷಣೆ ಮಾಡಬೇಕು. ಈ ಮೂಲಕ ಇದನ್ನು ಉಳಿಸಿಕೊಳ್ಳಲು ಮುಂದೆ ಕ್ರಮ ಕೈಗೊಳ್ಳಲಾಗುವುದು. ಪುರತಾನ ಕಾಲ ಕಟ್ಟಡ, ಇತಿಹಾಸವನ್ನು ಸಂರಕ್ಷಣೆ ಮಾಡುವುದು ನಮೆಲ್ಲರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.
ನಾನು ಉಸ್ತುವಾರಿ ಸಚಿವನಾಗಿ ಸುಮಾರು ಎರಡು ತಿಂಗಳು ಆಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಬೇಕಾದರೆ ಮೊದಲು ಜಿಲ್ಲೆಯನ್ನು ಅರಿಯಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ತೆರಳಿ, ಜನರನ್ನು ಭೇಟಿ ಮಾಡಿ ಅಲ್ಲಿನ ವಿಶೇಷತೆ, ಸಮಸ್ಯೆ ಹಾಗೂ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಮುಂದೆ ಈ ವಿಚಾರವನ್ನು ಜಿಲ್ಲಾಡಳಿತದ ಗಮನ ಕೊಡುವ ಕಾರ್ಯ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಬಳಿಕ ಸಚಿವರು ಬಾರಕೂರು ಸೈಂಟ್ ಪೀಟರ್ ಚರ್ಚ್ ಹಾಗೂ ಬಾರಕೂರು ಮಲೀಕ್ ದಿನಾರ್ ಮಸೀದಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮ್ದಾಸ್ ಮೊದಲಾದವರು ಉಪಸ್ಥಿತರಿದ್ದರು.