ಏಡ್ಸ್ ಜಾಗೃತಿ ಅಭಿಯಾನ: ಬೀದಿನಾಟಕ ಪ್ರದರ್ಶನ
ಕುಂದಾಪುರ, ನ.11: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ರೋಟರಿ ಕ್ಲಬ್ ಸನ್ರೈಸ್ ಹಾಗೂ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಇವರ ಸಂಯುಕ್ತ ಆಶ್ರಯದಲ್ಲಿ ಎಚ್ಐವಿ/ಏಡ್ಸ್ ತಡೆಗಟ್ಟುವಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿಗಳು ಕುಂದಾಪುರದಲ್ಲಿ ಫ್ಲ್ಯಾಶ್ ಮಾಬ್ ಮತ್ತು ಬೀದಿ ನಾಟಕದ ಮೂಲಕ ವಿಶೇಷ ಜಾಗೃತಿ ಅಭಿಯಾನ ನಡೆಸಿದರು.
ಕಾರ್ಯಕ್ರಮವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞ ಡಾ.ಚಂದ್ರ ಮರಕಾಲ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಜಯಕರ್ ಶೆಟ್ಟಿ, ರೋಟರಿ ಕ್ಲಬ್ ಸನ್ರೈನ್ನ ಪೂರ್ಣಿಮಾ ರವಿಶಂಕರ್, ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ನ ಉಪಪ್ರಾಂಶುಪಾಲ ರೂಪಶ್ರೀ ಕೆ.ಎಸ್. ಹಾಗೂ ಕುಂದಾಪುರ ತಾಲೂಕು ಆಸ್ಪತ್ರೆಯ ಆಪ್ತ ಸಮಾಲೋಚಕ ನಳಿನಾಕ್ಷಿ ಉಪಸ್ಥಿತರಿದ್ದರು. ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಸಂಧ್ಯಾ ಸ್ವಾಗತಿಸಿದರು.
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿಗಳು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜು, ಹೊಸ ಬಸ್ ನಿಲ್ದಾಣ, ಪುರಸಭೆ ಹಾಗೂ ಸಂತೆ ಮಾರುಕಟ್ಟೆಗಳಲ್ಲಿ ಫ್ಲ್ಯಾಶ್ಮಾಬ್ ಮತ್ತು ಬೀದಿ ನಾಟಕ ಪ್ರದರ್ಶಿಸಿದರು. ಈ ಮೂಲಕ ಎಚ್ಐವಿ ಹರಡುವ ವಿಧಾನಗಳು, ತಡೆಗಟ್ಟುವ ಕ್ರಮಗಳು, ಆರಂಭಿಕ ಪರೀಕ್ಷೆ, ಚಿಕಿತ್ಸೆ ಹಾಗೂ ಸಮಾಲೋಚನೆಯ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.