ಗೋವಾದಿಂದ ಅಕ್ರಮ ಮದ್ಯ ಸಾಗಾಟ: ನಾಲ್ವರು ಆರೋಪಿಗಳ ಬಂಧನ
ಪಡುಬಿದ್ರಿ, ನ.11: ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಜಮಾಡಿ ಟೋಲ್ ಬಳಿ ನ.11ರಂದು ಬಂಧಿಸಿದ್ದಾರೆ.
ಕಾರವಾರದ ಕಿನ್ನಾರ ಗ್ರಾಮದ ವಿನಯ್ (47), ಕಾರವಾರ ನಂದಗಡದ ಗಜಾನನ ನಾಯ್ಕ್ (45), ಕಾರವಾರದ ಅಮದಹಳ್ಳಿಯ ಸುಜಿತ್ ತಾಳೆಕೆರೆ (25), ಕಾರವಾರ ಶಿರ್ವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಬಂಧಿತ ಆರೋಪಿಗಳು
ಬಂಧಿತರಿಂದ 14,35,000 ರೂ. ಮೌಲ್ಯದ 2583 ಲೀಟರ್ ಮದ್ಯದ ಬಾಕ್ಸ್, 5 ಲಕ್ಷ ರೂ. ಮೌಲ್ಯದ ಮಹೀಂದ್ರಾ ಪಿಕ್ ಇನ್ಸುಲೇಟರ್ ವಾಹನ ಹಾಗೂ 3 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 22,35,000 ರೂ. ಎಂದು ಅಂದಾಜಿಸಲಾಗಿದೆ.
ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಅಲಿ ಖಚಿತ ಮಾಹಿತಿ ಆಧಾರದಂತೆ ಗೋವಾದಿಂದ ಮಂಗಳೂರಿಗೆ ಪಿಕ್ಅಪ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ಮತ್ತು ಅದಕ್ಕೆ ಕಾರಿನಲ್ಲಿ ಎಸ್ಕಾರ್ಟ್ ಮಾಡುತ್ತಿರುವ ಬಗ್ಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳ ಪೈಕಿ ವಿನಯ್ ವಿರುದ್ಧ ಈಗಾಗಲೇ ಕಾರವಾರ ಜಿಲ್ಲೆಯ ಚಿತ್ತಾಕುಲ ಪೊಲೀಸ್ ಠಾಣೆ, ಕಾರವಾರ ಗ್ರಾಮಾಂತರ ಹಾಗೂ ಅಬಕಾರಿ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯನ್ನು ಕಾರ್ಕಳ ಎಎಸ್ಪಿ ಇಶಿತಾ ಗುಪ್ತಾ ಮಾರ್ಗದರ್ಶನದಲ್ಲಿ ಕಾಪು ವೃತ್ತ ಪೊಲೀಸ್ ನಿರೀಕ್ಷಕ ಅಜ್ಮತ್ ಅಲಿ ಜಿ. ನೇತೃತ್ವದಲ್ಲಿ ಪಡುಬಿದ್ರೆ ಎಸ್ಸೈಗಳಾದ ಸಕ್ತಿವೇಲು, ಅನಿಲ್ ಕುಮಾರ್ ಟಿ ನಾಯ್ಕ್, ಅಪರಾಧ ಪತ್ತೆ ತಂಡದ ಎಎಸ್ಸೈಗಳಾದ ರಾಜೇಶ್, ಗಿರೀಶ್, ಸಿಬ್ಬಂದಿ ಕೃಷ್ಣಪ್ರಸಾದ್, ಜೀವನ್, ಸತೀಶ್ ಬೆಳ್ಳೆ, ಶಿವಾನಂದ ಪೂಜಾರಿ, ಪಡುಬಿದ್ರೆ ಠಾಣೆಯ ಅಶ್ವಿನ್ ಕುಮಾರ್, ಶರಣ್, ಯಾಸಿನ್ ಖಾಜಿ, ರೆಹಮಾನ್, ರುಕ್ಮಿಣಿ ಹಾಗೂ ಸಿಡಿಆರ್ ವಿಭಾಗದ ದಿನೇಶ್ ನಡೆಸಿದ್ದಾರೆ.