ಬೇಡಿಕೆ ಈಡೇರಿಕೆಗಾಗಿ ವಿಮಾ ಪಿಂಚಣಿದಾರರಿಂದ ಮತಪ್ರದರ್ಶನ
ಉಡುಪಿ, ನ.18: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ ಮತ್ತು ಅಖಿಲ ಭಾರತ ನಿವೃತ್ತ ವಿಮಾ ನೌಕರರ ಫೆಡರೇಶನ್ನ ಸದಸ್ಯರು ಎಲ್ಐಸಿ ಉಡುಪಿ ವಿಭಾಗೀಯ ಕಛೇರಿಯ ಎದುರು ಬುಧವಾರ ಮತಪ್ರದರ್ಶನ ನಡೆಸಿದರು.
ಪಿಂಚಣಿ ಪರಿಷ್ಕರಣೆ, ಆಗಸ್ಟ್ 1997ಕ್ಕಿಂತ ಮೊದಲಿನ ಪಿಂಚಣಿದಾರರಿಗೆ ಏಕರೂಪದ ಡಿ.ಎ ತಟಸ್ಥೀಕರಣ, 1986ರ ಪೂರ್ವದಲ್ಲಿ ನಿವೃತ್ತರಾದವರಿಗೆ ಎಕ್ಸ್-ಗ್ರೇಯಾ ಪಾವತಿಯಲ್ಲಿ ಹೆಚ್ಚಳ, ನಿವೃತ್ತರಿಗೆ ನಗದು ವೈದ್ಯಕೀಯ ಭತ್ತ್ಯೆ, ಪ್ರತೀ ವರ್ಷವೂ ಆರೋಗ್ಯ ತಪಾಸಣೆಯ ವೆಚ್ಚವನ್ನು ನೀಡುವ ಸೌಲಭ್ಯ, ಮೆಡಿಕ್ಲೈಮ್ ಯೋಜನೆಯಲ್ಲಿ ಸುಧಾರಣೆಗಳು, ಮೆಡಿಕ್ಲೈಮ್ ಯೋಜನೆಯ ಪ್ರಿಮಿಯಂನ ಮೇಲಿನ ಜಿ.ಎಸ್.ಟಿ ದರವನ್ನು ಕಡಿತಗೊಳಿಸುವುದು ಮತ್ತು ವಯಸ್ಸು 80 ವರ್ಷಗಳನ್ನು ಪೂರೈಸಿದ ಪಿಂಚಣಿದಾರರ ಮೂಲ ವೇತನವನ್ನು ಹೆಚ್ಚಿಸುವಂತೆ ಆಗ್ರಹಿಸಲಾಯಿತು.
ವಿಮಾನೌಕರರ ಸಂಘಟನೆಯ ಸದಸ್ಯರಾದ ಡೆರಿಕ್ ರೆಬೆಲ್ಲೋ ಮತ್ತು ನಿವೃತ್ತ ವಿಮಾ ನೌಕರರ ಫೆಡರೇಶನ್ನ ಕಾರ್ಯದರ್ಶಿ ಎಚ್.ಶುಭಚಂದ್ರ ಹತ್ವಾರ್ ಮಾತನಾಡಿದರು. ಈ ಕುರಿತ ಮನವಿಯನ್ನು ಎಲ್ಲೈಸಿಯ ಹಿರಿಯ ವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಮಾ ಪಿಂಚಣಿದಾರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಎ.ಮಧ್ವರಾಜ ಬಳ್ಳಾಲ್, ಅಖಿಲ ಭಾರತ ನಿವೃತ್ತ ವಿಮಾ ನೌಕರರ ಫೆಡರೇಶನ್ ಉಡುಪಿ ವಿಭಾಗದ ಅಧ್ಯಕ್ಷ ಪಿ.ವಸಂತ ಭಟ್ ಮೊದಲಾದವರು ಉಪಸ್ಥಿತರಿದ್ದರು.