ಅಪ್ಸರ್ ಕೊಡ್ಲಿಪೇಟೆಗೆ 3 ತಿಂಗಳ ಕಾಲ ಉಡುಪಿ ಜಿಲ್ಲಾ ಪ್ರವೇಶ ನಿರ್ಬಂಧ: ಡಿಸಿ ಸ್ವರೂಪ ಟಿ.ಕೆ
ಉಡುಪಿ, ನ.18: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರಿಗೆ ಉಡುಪಿ ಜಿಲ್ಲಾಡಳಿತ ಜಿಲ್ಲಾ ಪ್ರವೇಶನ್ನು ಮೂರು ತಿಂಗಳುಗಳ ಕಾಲ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ನ.18ರಿಂದ ಫೆ.17ರ ವರೆಗೆ ಮೂರು ತಿಂಗಳುಗಳ ಕಾಲ ಹಾಸನದ ಅಫ್ಸರ್ ಕೊಡ್ಲಿಪೇಟೆ ಅವರಿಗೆ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶನ್ನು ನಿರ್ಬಂಧಿಸಿ, ನಿಷೇಧಾಜ್ಞೆ ಜಾರಿ ಗೊಳಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿ ಹೊರಡಿಸಿದ್ದಾರೆ.
ಇದರಿಂದ ಎಸ್‌ಡಿಪಿಐ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಎಸ್‌ಐಆರ್ ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ಉಡುಪಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಹಮ್ಮಿಕೊಳ್ಳಲಾದ ಧರಣಿಯಲ್ಲಿ ಅಪ್ಸರ್ ಕೊಡ್ಲಿಪೇಟೆ ಭಾಗವಹಿಸಲಿಲ್ಲ.
ಧರಣಿಯಲ್ಲಿ ಅಫ್ಸರ್ ಕೊಡ್ಲಿಪೇಟೆ ಪ್ರಮುಖ ಭಾಷಣಕಾರರಾಗಿ ಆಗಮಿಸುವುದಕ್ಕೆ ನಿರ್ಬಂಧ ವಿಧಿಸಿರುವ ಉಡುಪಿ ಜಿಲ್ಲಾಡಳಿತದ ಕ್ರಮದ ವಿರುದ್ಧ ಧರಣಿ ನಿರತರು ಅಫ್ಸರ್ ಕೊಡ್ಲಿಪೇಟೆ ಎಂಬ ಭಿತ್ತಿಪತ್ರ ಹಿಡಿದು ಬೆಂಬಲ ವ್ಯಕ್ತಪಡಿಸಿದರು.