ಉಡುಪಿ, ನ.18: 2002ರ ಗುಜರಾತ್ ನರಮೇಧದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಮೂರು ವರ್ಷದ ಮಗು ಸೇರಿದಂತೆ ಕುಟುಂಬದ 14 ಜನರನ್ನು ಹತ್ಯೆ ಮಾಡಿದ ಭೀಕರ ಪ್ರಕರಣದ ಅಪರಾಧಿಗಳಾದ ಬಿಪಿನ್ಚಂದ್ ಕನ್ಯಾಯಾಲಾಲ್ ಜೋಶಿ ಮತ್ತು ಪ್ರದೀಪ್ ರಮಣ್ಲಾಲ್ ಮೋಧಿಯಾಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿ ಶಿಕ್ಷೆಯನ್ನು ಅಮಾನತು ಗೊಳಿಸಿರುವುದಕ್ಕೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಡುಪಿ ಕಳವಳ ವ್ಯಕ್ತಪಡಿಸಿದೆ.

ಈ ಹಿಂದೆ ಗುಜರಾತ್ ಸರ್ಕಾರವು ಈ ಎಲ್ಲಾ 11 ಅಪರಾಧಿಗಳನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದಾಗ ದೇಶಾದ್ಯಂತ ಹಾಗೂ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತದನಂತರ 2024ರಲ್ಲಿ ಸರ್ವೋಚ್ಚ ನ್ಯಾಯಾಲಯವು ಆ ಕಾನೂನುಬಾಹಿರ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ, ಸಂತ್ರಸ್ತೆಗೆ ನ್ಯಾಯದ ಭರವಸೆ ಮೂಡಿಸಿತ್ತು. ಆದರೆ, ಇದೀಗ ಮತ್ತೆ ಅಪರಾಧಿಗಳಿಗೆ ಜಾಮೀನು ನೀಡಿರುವುದು ಸಂತ್ರಸ್ತೆ ಬಿಲ್ಕಿಸ್ ಬಾನೋ ಅವರಿಗೆ ಹಾಗೂ ದೇಶದ ನ್ಯಾಯ ವ್ಯವಸ್ಥೆಯನ್ನು ನಂಬಿರುವ ಕೋಟ್ಯಂತರ ನಾಗರಿಕರಿಗೆ ಆಘಾತ ಉಂಟು ಮಾಡಿದೆ.

ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳಿಗೆ ನೀಡಲಾಗಿರುವ ಜಾಮೀನನ್ನು ತಕ್ಷಣವೇ ರದ್ದುಗೊಳಿಸ ಬೇಕು. ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಶಿಕ್ಷೆಯಿಂದ ವಿನಾಯಿತಿ ಪಡೆಯಲು ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ತಡೆ ಒಡ್ಡಬೇಕು. ಸಂತ್ರಸ್ತೆ ಬಿಲ್ಕಿಸ್ ಬಾನೋ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಭದ್ರತೆ ಹಾಗೂ ಸೂಕ್ತ ನ್ಯಾಯವನ್ನು ಖಾತ್ರಿಪಡಿಸಬೇಕು. ದೇಶದಲ್ಲಿ ಕಾನೂನಿನ ಆಡಳಿತ ಮತ್ತು ಮಹಿಳೆಯರ ಸುರಕ್ಷತೆ ಉಳಿಯಬೇಕಾದರೆ ಇಂತಹ ಘೋರ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗು ವುದು ಅತ್ಯಗತ್ಯ ಎಂದು ಸಾಲಿಡಾರಿಟಿ ಉಡುಪಿ ಅಧ್ಯಕ್ಷ ಅಫ್ವಾನ್ ಬಿ.ಹೂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಝೀರ್ ಪೊಲ್ಯ/ವಾರ್ತಾಭಾರತಿ

ಉಡುಪಿ ಜಿಲ್ಲಾ ವರದಿಗಾರರು

ನಝೀರ್ ಪೊಲ್ಯ ಅವರು ಕಳೆದ 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಸಂಜೆ ಪತ್ರಿಕೆಯಲ್ಲಿ ಮಾಧ್ಯಮ ವೃತ್ತಿ ಆರಂಭಿಸಿದ ಇವರು, ಒಂದೂವರೆ ವರ್ಷಗಳ ಕಾಲ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 20 ವರ್ಷಗಳಿಂದ ವಾರ್ತಾಭಾರತಿ ಪತ್ರಿಕೆಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಚಿಟ್ಟೆಗಳ ಬಗ್ಗೆ ಅಧ್ಯಯನ ಹಾಗೂ ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ. ಅದರೊಂದಿಗೆ ಫೋಟೋಗ್ರಫಿ ಕೂಡ ಇವರ ಆಸಕ್ತಿಯ ಕ್ಷೇತ್ರ. ಈವರೆಗೆ 250 ಪ್ರಬೇಧದ ಚಿಟ್ಟೆಗಳ ಛಾಯಾಚಿತ್ರವನ್ನು ಇವರು ಸಂಗ್ರಹಿಸಿದ್ದಾರೆ. ಇವರು ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು