ಮರವಂತೆ-ಪಡುಕೋಣೆ ಸೇತುವೆಯಲ್ಲಿ ವಾಹನ ಸವಾರರ ಪಡಿಪಾಟಲು
ಕುಂದಾಪುರ, ನ.19: ಕುಂದಾಪುರ- ಬೈಂದೂರು ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಇಲ್ಲಿನ ಪ್ರಸಿದ್ಧ ಮರವಂತೆ ವರಾಹ ಸ್ವಾಮಿ ದೇವಳದ ಸಮೀಪದ ಮರವಂತೆ- ಪಡುಕೋಣೆ ಸಂಪರ್ಕ ಸೇತುವೆಯಲ್ಲಿ ವಾಹನ ಸವಾರರು ಸಂಚಾರಕ್ಕೆ ವಿವಿಧ ರೀತಿಯಲ್ಲಿ ಪಡಿಪಾಟಲು ಪಡುವಂತಾಗಿದೆ.
ಪಡುಕೋಣೆ ಜನತೆಯ ಅನುಕೂಲಕ್ಕೆಂದು 2017ರಲ್ಲಿ ಮರವಂತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಲು ಸಂಪರ್ಕ ಸೇತುವೆ ನಿರ್ಮಾಣಗೊಂಡಿತ್ತು. ಆದರೆ ಇಲ್ಲಿ ಸೇತುವೆ ಮೇಲೇರುವುದು ಮತ್ತು ಸೇತುವೆಯಿಂದ ಕೆಳಗಿಳಿದು ರಾಷ್ಟ್ರೀಯ ಹೆದ್ದಾರಿ ತಲುಪುವುದು ಕಷ್ಟಸಾಧ್ಯವಾಗಿದೆ.
ಮರವಂತೆ- ಪಡುಕೋಣೆ ರಸ್ತೆಯ ವರಾಹ ದೇವಳ ಕ್ರಾಸ್ ಸಮೀಪ ಸೇತುವೆಯನ್ನು ನೇರವಾಗಿ ಹೆದ್ದಾರಿಗೆ ಜೋಡಿ ಸುವ ಅವಕಾಶವಿದ್ದರೂ ಅದನ್ನು ಮಾಡದ ಕಾರಣ ಸೇತುವೆಯಿಂದ ಪ್ರಪಾತಕ್ಕೆ ಇಳಿದು ಮೇಲೇರಿ ರಾಷ್ಟ್ರೀಯ ಹೆದ್ದಾರಿಯನ್ನು ಸೇರಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಮಣ್ಣಿನಿಂದ ಕೂಡಿರುವ ಈ ಹಾದಿ ವಾಹನ ಸವಾರರ ಪಾಲಿಗೆ ನಿಜವಾಗಿ ಕಂಟಕಪ್ರಾಯವಾಗಿದೆ.
ತಗ್ಗು ಪ್ರದೇಶದಿಂದ ಇಳಿದು ಬರುವ ವಾಹನಗಳು ಮೇಲೇರಿ ಹೆದ್ದಾರಿಗೆ ಬರುವ ಧಾವಂತದಲ್ಲಿ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಅಡ್ಡ ಸಿಲುಕುವ ಬಹಳಷ್ಟು ಘಟನೆಗಳು ನಡೆಯುತ್ತಿವೆ. ದೇವಳಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರು ಅಲ್ಲದೆ ಪಡುಕೋಣೆ ಭಾಗದಿಂದ ಬರುವ ನಾಗರಿಕರು ಇದರಿಂದ ಅತೀವ ತೊಂದರೆ ಎದುರಿಸುತ್ತಿದ್ದಾರೆ.
ಸೇತುವೆ ನಿರ್ಮಾಣಗೊಂಡು ದಶಕಗಳೇ ಕಳೆದರೂ ಸಮಸ್ಯೆ ಬಗೆಹರಿದಿಲ್ಲ. ಕೂಡು ರಸ್ತೆ ಎತ್ತರಿಸಿ ವಾಹನಗಳಿಗೆ ಅನುಕೂಲ ಮಾಡಿಕೊಡಿ ಎಂಬ ಮನವಿಗೆ ಸಂಬಂಧಪಟ್ಟವರು ಸ್ಪಂದಿಸಿಲ್ಲ. ಪ್ರವಾಸಿಗರು, ನಿತ್ಯ ಪ್ರಯಾಣಿಕರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಮರವಂತೆ ರಾಷ್ಟ್ರೀಯ ಹೆದ್ದಾರಿಯಿಂದ ಪಡುಕೋಣೆ ಭಾಗಕ್ಕೆ ಬಸ್ ಸೇವೆಯೂ ಇಲ್ಲವಾಗಿದೆ ಎಂದು ಪಡುಕೋಣೆ ನಿವಾಸಿ ವಿಶ್ವನಾಥ್ ಹೇಳುತ್ತಾರೆ.
‘ಮರವಂತೆಯ ವರಾಹ ದೇವಳದ ಪಕ್ಕದಲ್ಲೇ ಸೇತುವೆಯಿದ್ದು ಕೆಳಗಿಳಿಯುವ ಹಾದಿ ಕಂದಕದಂತಿದೆ. ಕಮರಿಗೆ ಇಳಿಸಿ ಹೆದ್ದಾರಿ ತಲುಪುವುದು ವಾಹನ ಸವಾರರ ಪಾಲಿಗೆ ಹರಸಾಹಸವಾಗಿದೆ. ದೇವಳಕ್ಕೆ ಬರುವ ಭಕ್ತರು, ಕಡಲ ಸೌಂದರ್ಯ ವೀಕ್ಷಿಸಲು ಬರುವ ಪ್ರವಾಸಿಗರು ಅಲ್ಲದೆ ಪಡುಕೋಣೆ ಭಾಗಕ್ಕೆ ತೆರಳುವ ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಅಗತ್ಯಕ್ರಮ ಕೈಗೊಳ್ಳಬೇಕು.
-ಗೋಪಾಲಕೃಷ್ಣ ನಾಡ, ಸಾಮಾಜಿಕ ಕಾರ್ಯಕರ್ತ.