ಉಡುಪಿ, ನ.18: ಶಾಸ್ತ್ರೀಯ ಶಿಸ್ತು, ಜಾನಪದ ಸ್ವಾತಂತ್ರ್ಯವುಳ್ಳ ಕರಾವಳಿಯ ಯಕ್ಷಗಾನ ಬಯಲಾಟ, ಒಂದು ಜೀವಂತ ಕಲೆಯಾಗಿದ್ದು, ಅದರ ಚೌಕಟ್ಟು ಮೀರಿದರೂ ಸರಿ-ತಪ್ಪು ಹೇಳುವ ಕೋರ್ಟು ಸೃಷ್ಟಿಯಾಗಿಲ್ಲ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಹಾಗೂ ಉಡುಪಿ ಜಿಲ್ಲೆ ವತಿಯಿಂದ ಕುಂಜಿಬೆಟ್ಟು ಶಾರದಾ ರೆಸಿಡೆನ್ಸಿಯಲ್ ಸ್ಕೂಲಿನ ಗೀತಾಂಜಲಿ ಸಭಾಂಗಣದಲ್ಲಿ ಬುಧವಾರಸಂಜೆ ನಡೆದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ, ಯಕ್ಷಗಾನದ ಕುರಿತು ವಿವರವಾಗಿ ಮಾತನಾಡಿದರು.

ಯಕ್ಷಗಾನ ಕೇವಲ ಪುರುಷರಿಗೆ ಸೀಮಿತವಾದ ಕಲೆ ಎಂಬ ಅಭಿಪ್ರಾಯ ಸರಿಯಲ್ಲ. ಇದು ಎಲ್ಲರಿಗೂ ಸೇರಿದ ಕಲೆ. ಆದರೆ ಕಲೆಯಲ್ಲಿ ತಾರತಮ್ಯ ನೀತಿ ಸರಿಯಲ್ಲ ಎಂದು ಹೇಳಿದ ಪ್ರೊ.ಸಾಮಗ, ಶಾಸ್ತ್ರೀಯ ಕಲಾವಿದರಿಗೆ ಪಂಚ ತಾರಾ ಆತಿಥ್ಯ, ಯಕ್ಷಗಾನ/ಜನಪದ ಕಲಾವಿದರಿಗೆ ಕಲ್ಯಾಣ ಮಂಟಪದಲ್ಲಿ ಉಳಿದುಕೊಳ್ಳಬಹುದಾದ ವ್ಯವಸ್ಥೆಯ ತಾರತಮ್ಯ ಖಂಡಿತ ಸರಿಯಲ್ಲ ಎಂದು ಹೇಳಿದರು.

ಯಕ್ಷಗಾನ ಎಂಬುದು ಕುಣಿತ ಮತ್ತು ಮಾತುಗಾರಿಕೆಯ ಹದವಾದ ಮಿಶ್ರಣ. ಇಲ್ಲಿ ಮಾತುಗಾರಿಕೆ ಬಾಯಿಪಾಠದ ಕಸರತ್ತಲ್ಲ. ಅದು ಭಾಗವತರ ಹಾಡಿಗನುಗುಣವಾಗಿ ಕಲಾವಿದರು ತಮ್ಮ ಬುದ್ಧಿಮತ್ತೆ ಬಳಸಿ ಮಾಡುವ ಸಂಭಾಷಣೆಯಾಗಿರುತ್ತದೆ ಎಂದರು.

ಯಕ್ಷಗಾನದಲ್ಲಿ ಸಿನಿಮಾ ಅಂಶ ಬರಬಾರದು ಎಂದು ಅಭಿಪ್ರಾಯಪಟ್ಟ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಹಾಗೂ ಹರಿಕಥಾ ಕಲಾವಿದ ಮಲ್ಪೆ ಶಂಕರನಾರಾಯಣ ಸಾಮಗರ ಮಗನಾದ ಪ್ರೊ.ಎಂ.ಎಲ್.ಸಾಮಗರು, ಕಂಬಳದಂತೆ ಯಕ್ಷಗಾನಕ್ಕೂ ಸಮಿತಿ ಬೇಕೆನ್ನುವ ಬೇಡಿಕೆಯಿದೆ. ನಟನಾದವ ಒಂದೇ ಬಗೆಯ ಪಾತ್ರಕ್ಕೆ ಸೀಮಿತವಾಗದೆ ಸ್ತ್ರೀ ವೇಷ ಸಹಿತ ವಿಭಿನ್ನ ಪಾತ್ರ ಮಾಡಬೇಕು. ರಂಗಸ್ಥಳದ ಎಲ್ಲಾ ಸವಾಲುಗಳನ್ನು ಎದುರಿಸಬೇಕು ಎಂದರು.

ಗಾಂಧಿವಾದಿಯಾಗಿದ್ದ ತಂದೆ ಶಂಕರ ನಾರಾಯಣ ಸಾಮಗರಿಂದ ತಾನು ಪ್ರಭಾವಿತನಾದವನಲ್ಲ. ಕಲಿಕೆ ನಿರಂತರ. ಜ್ವರ,ಶೀತದಿಂದ ಏನೂ ಕೂಡುವುದಿಲ್ಲ ಎಂದ ಕಲಾವಿದನೂ ಮುಖಕ್ಕೆ ಬಣ್ಣ ಹಾಕಿ ವೇಷಭೂಷಣ ಧರಿಸಿ ರಂಗಸ್ಥಳಕ್ಕೆ ಹೋದರೆ ನೋವೆಲ್ಲಾ ಮಾಯವಾಗಿ ಎಂದಿನಂತೆ ಸರಾಗವಾಗಿ ಕುಣಿದು ತನ್ನ ಪಾತ್ರ ನಿಭಾಯಿಸಿ ಬರುತ್ತಾನೆ ಎಂದು ಅವರು ಕಲಾವಿದನ ಮೇಲೆ ಕಲೆಯ ಪ್ರಭಾವದ ಕುರಿತು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲಾ ಮಠಪತಿ, ಶಾಸ್ತ್ರೀಯ ಶಿಸ್ತು, ಜಾನಪದ ಮೇಳೈಸುವಿಕೆಯಿಂದ ಕರಾವಳಿಯ ಯಕ್ಷಗಾನ ಕಲೆ ಇಂದು ವಿಶ್ವದಲ್ಲೇ ಮನ್ನಣೆ ಪಡೆದಿದೆ. ಸಾಧಕರನ್ನು ಮಕ್ಕಳು, ಯುವಜನತೆಗೆ ಪರಿಚಯಿಸಬೇಕು ಎಂದರು.

ಶಾರದಾ ವಸತಿ ಶಾಲೆಯ ನಿರ್ದೇಶಕ ವಿದ್ಯಾವಂತ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ ಬಿ ಶೆಟ್ಟಿಗಾರ್

contributor