ಮಣಿಪಾಲ, ನ.19: ನಿಮ್ಮ ನಿಜವಾದ ಯಶಸ್ಸು ವೈಯಕ್ತಿಕ ಸಾಧನೆಯಲ್ಲಿ ಮಾತ್ರವಲ್ಲ, ಇತರರ ಬದುಕಿನಲ್ಲಿ ನೀವು ಮೂಡಿಸುವ ಪ್ರಭಾವದಲ್ಲಿ ಅಡಗಿದೆ. ಮಾನವೀಯ ಮೌಲ್ಯಗಳು ಹಾಗೂ ಮೌಲ್ಯಯುತ ಸಂಬಂಧಗಳು ಎಂದಿಗೂ ಶಾಶ್ವತ ಎಂದು ಕೋನೆ ಎಲಿವೇಟರ್ಸ್ ಸಂಸ್ಥೆಯ ಭಾರತ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಅಮಿತ್ ಗೋಸ್ಸೇನ್ ಹೇಳಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಇಂದು ಪ್ರಾರಂಭಗೊಂಡ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ 34ನೇ ಘಟಿಕೋತ್ಸವದ ಮೊದಲ ದಿನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣದಲ್ಲಿ ಮಾತನಾಡುತಿದ್ದರು.

ವಿಶ್ವವಿದ್ಯಾನಿಲಯ ಎಂಬುದು ಕೇವಲ ಪದವಿ ಪಡೆಯುವ ಕೇಂದ್ರವಲ್ಲ. ಇಲ್ಲಿ ಶಾಶ್ವತ ಸ್ನೇಹಗಳು ಚಿಗುರೊಡೆಯು ತ್ತವೆ, ಮೌಲ್ಯಗಳು ದೃಢವಾಗುತ್ತವೆ ಹಾಗೂ ಎಂದೂ ಮರೆಯದ ನೆನಪುಗಳು ಸೃಷ್ಟಿಯಾಗುತ್ತವೆ. ಬದುಕಿನ ಹೊಸ ಮಜಲಿಗೆ ಕಾಲಿಡುತ್ತಿರುವ ನೀವು ಬದುಕಿನ ಕುತೂಹಲವನ್ನು ಎಂದೂ ಕಳೆದು ಕೊಳ್ಳಬೇಡಿ, ಬದುಕಿನುದ್ದಕ್ಕೂ ಕಲಿಯುವ ಸಂಕಲ್ಪ ತೊರೆಯಬೇಡಿ ಎಂದು ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಂದು ತಂತ್ರಜ್ಞಾನಗಳು ವೇಗವಾಗಿ ವಿಕಸನಗೊಳ್ಳುತ್ತಿವೆ. ಅವುಗಳನ್ನು ಕಡೆಗಣಿಸದೇ, ಮಾನವೀಯ ಮೌಲ್ಯಗಳು ಹಾಗೂ ಮೌಲ್ಯಯುತ ಸಂಬಂಧಗಳನ್ನು ಕಾಲಾತೀತವಾಗಿ ಉಳಿಸಿಕೊಳ್ಳಿ. ಸೋಲಿನಿಂದ ಪಾಠ ಕಲಿಯಿರಿ, ಕನಸು ಕಾಣುವುದನ್ನು ನಿಲ್ಲಿಸಬೇಡಿ. ಬದಲಾಗುತ್ತಿರುವ ಜಗತ್ತಿನ ಸವಾಲುಗಳಿಗೆ ಸ್ಪಂಧಿಸುತ್ತಿರಿ ಎಂದರು.

ಮಾಹೆ ಟ್ರಸ್ಟಿನ ಟ್ರಸ್ಟಿ ವಸಂತಿ ಆರ್. ಪೈ ಅವರ ಉಪಸ್ಥಿತಿಯಲ್ಲಿ ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಅವರು ಘಟಿಕೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಮಣಿಪಾಲ ಕ್ಯಾಂಪಸ್‌ನಲ್ಲಿ ನಡೆಯುವ ಮೂರು ದಿನಗಳ ಘಟಿಕೋತ್ಸವದ ಮೊದಲ ದಿನ ಒಟ್ಟು 1,348 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಸಂತಿ ಆರ್. ಪೈ ಅವರು ಮಾಹೆಯ ನೂತನ ದೂರದೃಷ್ಟಿ (ವಿಶನ್) ಹಾಗೂ ಧ್ಯೇಯ (ಮಿಷನ್)ಗಳನ್ನು ಅನಾವರಣಗೊಳಿಸಿದರು. ದೂರದೃಷ್ಟಿ ಯಲ್ಲಿ ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆಯ ಕೇಂದ್ರವಾಗುವುದು, ಆ ಮೂಲಕ ಸಮಗ್ರ ಮಾನವ ಅಭಿವೃದ್ಧಿ ಹಾಗೂ ಸುಸ್ಥಿರ ಸಾಮಾಜಿಕ ಬದಲಾವಣೆಯನ್ನು ಉತ್ತೇಜಿಸುವ ಸಂಕಲ್ಪ ಮಾಡಿದರೆ, ಧ್ಯೇಯದಲ್ಲಿ ಪರಿವರ್ತನಾಶೀಲ ಕಲಿಕೆ, ಕಾಳಜಿಯುಕ್ತ ವೈದ್ಯಕೀಯ ಸೇವೆ, ಪರಿಣಾಮಕಾರಿ ಸಂಶೋಧನೆ ಮೂಲಕ ಜನರನ್ನು ಸಬಲರನ್ನಾಗಿಸುವುದು ಸೇರಿದೆ.

ಮಾಹೆಯ ಕುಲಪತಿ ಡಾ.ಶರತ್ ಕೆ.ರಾವ್ ಅವರು ಮಾತನಾಡಿ, ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ನೀಡುವು ದಕ್ಕೆ ಸೀಮಿತವಾಗದೇ, ಅದಕ್ಕೂ ಮಿಗಿಲಾದ ಜವಾಬ್ದಾರಿ ಹೊರುವ ನೂತನ ಧ್ಯೇಯೋದ್ದೇಶಗಳನ್ನು ನಾವು ಹೊಂದಿದ್ದೇವೆ ಎಂದರು.

ಇಬ್ಬರಿಗೆ ಚಿನ್ನದ ಪದಕ: ಮಾಹೆ ವಿವಿಯಲ್ಲಿ ಈ ಬಾರಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಾದ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಪದವೀಧರೆ ಪ್ರಿಯಾಂಶಿ ರಾಸ್ತೋಗಿ ಮತ್ತು ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಬಿಟೆಕ್ ಪದವೀಧರೆ ಕೋಮಲ್ ಮಾಥುರ್‌ಗೆ ಡಾ.ಟಿ.ಎಂ.ಎ. ಪೈ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಮಾಹೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹ ಕುಲಪತಿಗಳಾದ ಡಾ. ಕರುಣಾಕರ ಕೋಟೆಗಾರ್ ಅತಿಥಿ ಗಳನ್ನು ಸ್ವಾಗತಿಸಿದರೆ, ಕುಲಪತಿ ಡಾ. ಶರತ್ ಕೆ. ರಾವ್ ಮಾಹೆ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಎಂಐಟಿಯ ನಿರ್ದೇಶಕ ಡಾ.ಚಂದ್ರಕಲಾ ಸಿ.ಬಿ. ಅತಿಥಿ ಪರಿಚಯ ಮಾಡಿದರು. ಮಾಹೆಯ ರಿಜಿಸ್ಟ್ರಾರ್ ಡಾ. ಪಿ. ಗಿರಿಧರ ಕಿಣಿ ವಂದಿಸಿದರು.



 


 




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ ಬಿ ಶೆಟ್ಟಿಗಾರ್

ಉಡುಪಿ ಜಿಲ್ಲಾ ವರದಿಗಾರರು

ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸಂಪಾದಕತ್ವದ 'ಮುಂಗಾರು' ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 1985ರಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಬಿ.ಬಿ.ಶೆಟ್ಟಿಗಾರ್, ಕ್ರೀಡಾ ಸಂಪಾದಕರಾಗಿ ಮುಂಗಾರು , ಬಳಿಕ ಜನವಾಹಿನಿ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದರು. 2001ರಲ್ಲಿ ಜನವಾಹಿನಿಯ ಉಡುಪಿ ಜಿಲ್ಲಾ ವರದಿಗಾರನಾಗಿ ನಿಯುಕ್ತಿ ಗೊಂಡ ಇವರು ಕಳೆದ ಎರಡು ದಶಕಕ್ಕೂ ಅಧಿಕ ಸಮಯದಿಂದ 'ವಾರ್ತಾಭಾರತಿ'ಯ ಉಡುಪಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.