ಉಡುಪಿ, ನ.18: ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಶಾರದಾಕೃಷ್ಣ ಪ್ರಶಸ್ತಿ’ಗೆ ಶಿಕ್ಷಕ, ಸಂಘಟಕ ಹಾಗೂ ಕಲಾವಿದ ಉಡುಪಿಯ ಮುರಳಿ ಕಡೆಕಾರ್ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರಾದ ಮುರಳಿ ಕಡೆಕಾರ್ ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಕೊಡಗು, ಶಿಕ್ಷಣ ಮತ್ತು ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರವಿರಾಜ್ ತಿಳಿಸಿದರು.

ಮುಂದಿನ ಜನವರಿ 23ರಂದು ಸಂಜೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಮೂರು ದಿನಗಳ ಸಂಸ್ಕೃತಿ ಉತ್ಸವದ ಮೊದಲ ದಿನ ಮುರಳಿ ಕಡೆಕಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ 50,000ರೂ. ಗೌರವಧನವನ್ನು ಒಳಗೊಂಡಿದೆ ಎಂದು ಅವರು ವಿವರಿಸಿದರು.

ಮುರಳಿ ಕಡೆಕಾರ್ ಅವರು ನಿಟ್ಟೂರು ಪ್ರೌಢಶಾಲೆಯಲ್ಲಿ 32 ವರ್ಷ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ, ಐದು ವರ್ಷ ಮುಖ್ಯ ಶಿಕ್ಷಕರಾಗಿ ಒಟ್ಟು 37 ವರ್ಷ ಸೇವೆ ಸಲ್ಲಿಸಿದ್ದಾರೆ. ಸರಕಾರದ ಅನುದಾನವಿಲ್ಲದೆ 2000ದಲ್ಲಿ ಅವರು ಶಾಲೆಯ ವಿದ್ಯಾರ್ಥಿಗಳಿಗೆ ನಿರಂತರ ಉಚಿತ ಗಂಟಿಯೂಟವನ್ನು ಮಧ್ಯಾಹ್ನ ನೀಡಿದ್ದರು. 2006ರಲ್ಲಿ ಶಾಲೆಯ ವಿದ್ಯುತ್ ಸಂಪರ್ಕ ಇಲ್ಲದ ಬಡ ವಿದ್ಯಾರ್ಥಿಗಳ ಮನೆಗೆ ವಿದ್ಯುತ್ ಅಥವಾ ಸೋಲಾರ್ ಸೌಲಭ್ಯದ ಮೂಲಕ ಬೆಳಕು ನೀಡಿದ್ದರು.

ಮುರಳಿ ಕಡೆಕಾರ್ ನೇತೃತ್ವದಲ್ಲಿ ಜಿಲ್ಲೆಯ ಯಕ್ಷಗಾನ ಕಲಾವಿದರ ಒಳಿತಿಗಾಗಿ ದುಡಿಯುವ ಯಕ್ಷಗಾನ ಕಲಾರಂಗದ ಮೂಲಕ 1990ರಿಂದ ಅನೇಕ ಕಾರ್ಯಕ್ರಮಗಳನ್ನು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. 2005ರಲ್ಲಿ ಪ್ರಾರಂಭಿಸಿದ ವಿದ್ಯಾಪೋಷಕ್ ಮೂಲಕ ಇದುವರೆಗೆ 13,500ಕ್ಕೂ ಅಧಿಕವಿದ್ಯಾರ್ಥಿಗಳಿಗೆ 11 ಕೋಟಿ ರೂ.ಗೂ ಅಧಿಕ ಆರ್ಥಿಕ ನೆರವು, 109 ಬಡ ವಿದ್ಯಾರ್ಥಿಗಳಿಗೆ ಮನೆ ನಿರ್ಮಾಣ, ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಜಿಲ್ಲೆಯ 99 ಶಾಲೆಗಳ 3000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತಿದ್ದಾರೆ. ಹೀಗೆ ಅವರು ನಿಸ್ವಾರ್ಥವಾಗಿ ಸಾವಿರಾರು ಮಂದಿಯ ಬದುಕಿಗೆ ಬೆಳಕಾಗುವ ಕಾಯಕದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಉಪಾಧ್ಯಕ್ಷೆ ಡಾ.ಭಾರ್ಗವಿ ಐತಾಳ್, ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥ ವಾಸುದೇವ ಅಡಿಗ ಉಪಸ್ಥಿತರಿದ್ದರು.


ಮುರಳಿ ಕಡೆಕಾರ್

 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ ಬಿ ಶೆಟ್ಟಿಗಾರ್

contributor