ವಾರ್ತಾಭಾರತಿ ವರದಿಗೆ ಫಲಶ್ರುತಿ | ಕೋಡಿ ಪಂಚಗಂಗಾವಳಿ ನದಿ ಪ್ರದೇಶ ಸ್ವಚ್ಛ: ಸಿಸಿಟಿವಿ ಅಳವಡಿಕೆ
ಕುಂದಾಪುರ, ನ.20: ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿ ಬೀಚ್ ಸಂಪರ್ಕಿಸುವ ಕೋಡಿ ಸೇತುವೆಯಿಂದ ಪಂಚಗಂಗಾವಳಿ ನದಿಗೆ ತ್ಯಾಜ್ಯ ಎಸೆಯುವುದಕ್ಕೆ ಇದೀಗ ಕಡಿವಾಣ ಬಿದ್ದಿದೆ. ವಾರ್ತಾಭಾರತಿ ವರದಿಯ ಫಲ ಶ್ರುತಿಯಾಗಿ ಡಂಪಿಂಗ್ ಯಾರ್ಡ್ ರೀತಿಯಲ್ಲಿದ್ದ ಈ ಪ್ರದೇಶವನ್ನು ಪುರಸಭೆಯು ಸ್ವಚ್ಛಗೊಳಿಸಿ, ತ್ಯಾಜ್ಯ ಎಸೆಯ ದಂತೆ ಸೂಚನಾ ಫಲಕ ಅಳವಡಿಸಿ, ಸಾರ್ವಜನಿಕರ ಬೇಡಿಕೆಯಾಗಿದ್ದ ಸಿಸಿಟಿವಿಯನ್ನು ಅಳವಡಿಸಿದೆ.
ಕೋಡಿ ಸಂಪರ್ಕಿಸುವ ಸೇತುವೆಯಿಂದ ಕೆಳಕ್ಕೆ ಪಂಚಗಂಗಾವಳಿ ನದಿಗೆ ಎಲ್ಲಿಂದಲೋ ವಾಹನಗಳಲ್ಲಿ ತ್ಯಾಜ್ಯ ಗಳನ್ನು ತಂದು ಎಸೆಯುತ್ತಿದ್ದು, ಇದರಿಂದ ತ್ಯಾಜ್ಯ ನದಿ ನೀರಿನೊಂದಿಗೆ ಸೇರಿ ಮಾಲಿನ್ಯಗೊಳ್ಳುತ್ತಿತ್ತು. ಅಲ್ಲದೆ ಇಡೀ ಪರಿಸರ ಡಂಪಿಂಗ್ ಯಾರ್ಡ್ನಂತೆ ಆಗಿತ್ತು. ಇದರಿಂದಾಗಿ ಸೂಕ್ಷ್ಮ ಪರಿಸರ ವ್ಯವಸ್ಥೆಗೂ ಧಕ್ಕೆಯಾದ ಬಗ್ಗೆ ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದರು.
ಈ ಬಗ್ಗೆ ವಾರ್ತಾಭಾರತಿ ಪತ್ರಿಕೆಯು ನ.5ರಂದು ’ಕೋಡಿ: ನದಿಗೆ ಕಸ ಎಸೆಯುವುದಕ್ಕೆ ಕಡಿವಾಣ ಹಾಕಲು ಆಗ್ರಹ’ ಎಂಬ ತಲೆಬರಹದಡಿಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು. ವರದಿಗೆ ತಕ್ಷಣವೇ ಸ್ಪಂದಿಸಿದ್ದ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ವಾರ್ತಾ ಭಾರತಿ ವರದಿ ಪ್ರತಿಯ ಜೊತೆಗೆ ಉಡುಪಿ ಜಿಲ್ಲಾ ನಗರಾ ಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಕ್ತಕ್ರಮಕ್ಕೆ ಸೂಚಿಸಿದ್ದರು.
ಬಳಿಕ ನ.17ರಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯಿಂದ ಪುರಸಭೆಗೆ ಪತ್ರ ರವಾನಿಸಲಾಗಿತ್ತು. ಈ ಕುರಿತು ಪುರಸಭೆ ಸೂಕ್ತ ಕ್ರಮವಹಿಸಿ, ಅಗತ್ಯ ವ್ಯವಸ್ಥೆ ಕಲ್ಪಿಸಿದೆ. ಕುಂದಾಪುರ ಪುರಸಭೆ ಕಸದ ರಾಶಿಯನ್ನು ಸ್ವಚ್ಚಗೊಳಿಸಿ ಸುಂದರ ರೂಪ ನೀಡುವ ಕಾರ್ಯವನ್ನು ಮಾಡಲಾಯಿತು. ಕಳೆದ ಹಲವಾರು ಸಮಯ ಗಳಿಂದ ಡಂಪಿಂಗ್ ಯಾರ್ಡ್ ರೀತಿಯಾಗಿದ್ದ ಈ ಪ್ರದೇಶವನ್ನು ಪುರಸಭೆಯು ವಿಲೇಗೊಳಿಸಿ, ತ್ಯಾಜ್ಯ ಎಸೆಯದಂತೆ ಸೂಚನಾ ಫಲಕ ಅಳವಡಿಸಿದ್ದಲ್ಲದೆ ಸಾರ್ವಜನಿಕರ ಬೇಡಿಕೆಯಾಗಿದ್ದ ಸಿಸಿಟಿವಿಯನ್ನು ಈ ಸ್ಥಳದಲ್ಲಿ ಅಳವಡಿಸಿದೆ.
ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಆನಂದ ಜೆ. ನ.18ರಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ಧಿಕಾರಿಗಳಿಗೆ ಸ್ಥಳದ ಪ್ರಸ್ತುತ ಛಾಯಾಚಿತ್ರದೊಂದಿಗೆ ವರದಿ ನೀಡಿದ್ದು ಅಂದಿನ ದಿನವೇ ಯೋಜನಾಧಿಕಾರಿ ಸುಬ್ರಮಣ್ಯ ಶೆಟ್ಟಿ ಪಿ. ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳಿಗೆ ವಿಸ್ತ್ರತ ವರದಿ ರವಾನಿಸಿದ್ದಾರೆ.