‘ಎಲ್ಲಾ ವಿಧದ ದೋಣಿಗಳ ನೋಂದಣಿ, ಮೀನುಗಾರರಿಗೆ ಐಡಿ ಕಾರ್ಡ್ ಕಡ್ಡಾಯ’
ಮರ್ಚಂಟ್ ಶಿಪ್ಪಿಂಗ್ ನಿಯಮ-2026ರ ಕುರಿತು ಕಾರ್ಯಾಗಾರ
ಮಲ್ಪೆ, ನ.20: ಕೇಂದ್ರ ಸರಕಾರದ ‘ಮರ್ಚಂಟ್ ಶಿಪ್ಪಿಂಗ್ ಆ್ಯಕ್ಟ್ 2025’ ರ ಅಡಿಯಲ್ಲಿ ಜಾರಿಗೊಳಿಸಲಿರುವ ಮರ್ಚಂಟ್ ಶಿಪ್ಪಿಂಗ್ (ಮೀನುಗಾರಿಕಾ ದೋಣಿಗಳು) ನಿಯಮಗಳು-2026ರ ಕರಡನ್ನು ಅಂತಿಮಗೊಳಿಸುವ ಕುರಿತು ರಾಜ್ಯದ ಕರಾವಳಿ ಜಿಲ್ಲೆಗಳ ಪಾಲುದಾರರೊಂದಿಗೆ (ಮೀನುಗಾರರು ಮತ್ತು ಮೀನುಗಾರಿಕೆಗೆ ಸಂಬಂಧಿಸಿದವರು) ಸಮಾಲೋಚನಾ ಸಭೆಯನ್ನು ಇಂದು ಮಲ್ಪೆ ಬಂದರಿನೊಳಗಿರುವ ಮಲ್ಪೆ ಮೀನುಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಮೀನುಗಾರಿಕಾ ಇಲಾಖೆ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಕೇಂದ್ರ ಸರಕಾರದ ಮೀನುಗಾರಿಕಾ ಸಚಿವಾಲಯದ ಅಧೀನಕ್ಕೊಳಪಟ್ಟ ಕೊಚ್ಚಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್, ನಾಟಿಕಲ್ ಆ್ಯಂಡ್ ಇಂಜಿನಿಯರಿಂಗ್ ಟ್ರೈನಿಂಗ್ (ಸಿಫ್‌ನೆಟ್) ಸಂಸ್ಥೆಯ ವಿಜ್ಞಾನಿಗಳು ಇಡೀ ದೇಶಕ್ಕೆ ಅನ್ವಯಿಸುವಂತೆ ರಚಿಸುವ ಕಾನೂನಿಗೆ ಸೂಕ್ತ ತಿದ್ದುಪಡಿ ತರಲು ಸ್ಥಳೀಯ ಮೀನುಗಾರರಿಗೆ ಮಾಹಿತಿಗಳನ್ನು ನೀಡಿ ಅವರ ಅಭಿಪ್ರಾಯಗಳನ್ನು ಆಲಿಸಿದರು.
ದೇಶಾದ್ಯಂತದ ಮೀನುಗಾರರಿಗಾಗಿ ಜಾರಿಗೊಳಿಸುತ್ತಿರುವ ನಿಯಮಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡ ಸಿಫ್‌ನೆಟ್‌ನ ಹಿರಿಯ ವಿಜ್ಞಾನಿ ಅಶಿಶ್ ಕೌಶಿಕ್, ಕೇಂದ್ರ ಬಂದರು, ಮೀನುಗಾರಿಕೆ ಹಾಗೂ ಜಲಸಾರಿಗೆ ಸಚಿವಾಲಯ ದಿಂದ 2025ರ ಮಾರ್ಚ್ 15ರಿಂದ ಜಾರಿಗೊಂಡಿರುವ ಮರ್ಚಂಟ್ ಶಿಪ್ಪಿಂಗ್ ಆ್ಯಕ್ಟ್‌ಗೆ, ಮರ್ಚಂಟ್ ಶಿಪ್ಪಿಂಗ್ ನಿಯಮಗಳು-2026ಗಾಗಿ ದೇಶಾದ್ಯಂತ ಮೀನುಗಾರರೊಂದಿಗೆ ಸಮಾಲೋಚನೆ, ಸಂವಾದ, ಚರ್ಚೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಮೀನುಗಾರರ ಹಾಗೂ ಮೀನುಗಾರಿಕಾ ದೋಣಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕಾನೂನನ್ನು ಜಾರಿಗೊಳಿಸ ಲಾಗುತ್ತಿದೆ. ಇದು ದೇಶದ ಎಲ್ಲಾ ಮೀನುಗಾರಿಕಾ ದೋಣಿಗಳಿಗೂ ಅನ್ವಯಿಸಿದರೂ, ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯದ ನಿಯಮಗಳು ಅಳವಡಿಸಿಕೊಳ್ಳಬಹುದು. ಪರವಾನಿಗೆ, ಮೀನುಗಾರಿಕೆ ನಿರ್ವಹಣೆ, ಮೀನುಗಾರಿಕೆ ನಿಷೇಧ, ಮೀನುಗಾರಿಕಾ ವಲಯ, ಸಂರಕ್ಷಣಾ ಕ್ರಮಗಳನ್ನು ಆಯಾ ರಾಜ್ಯದ ನಿಯಮದಂತೆ ಕೈಗೊಳ್ಳಬಹುದಾಗಿದೆ ಎಂದವರು ತಿಳಿಸಿದರು.
ಮುಂದಿನ ವರ್ಷದಿಂದ ಅನುಷ್ಠಾನಗೊಳ್ಳುವ ಕಾನೂನಿನಂತೆ ಮೀನುಗಾರಿಕೆಗಾಗಿ ಬಳಸುವ ಎಲ್ಲಾ ವಿಧದ ದೋಣಿಗಳ ಹಾಗೂ ಹೋಟ್ ಮತ್ತು ಹಡಗುಗಳ ನೋಂದಣಿ ಕಡ್ಡಾಯವಾಗಿದ್ದು, ನೋಂದಣಿ ಇಲ್ಲದ ಯಾವುದೇ ದೋಣಿ ಸಮುದ್ರಕ್ಕೆ ಇಳಿದರೆ ಕೋಸ್ಟ್‌ಗಾರ್ಡ್ ಅದನ್ನು ವಶಪಡಿಸಿಕೊಂಡು ಅದರಲ್ಲಿದ್ದವರನ್ನು ಬಂಧಿಸಬಹುದು. ಯಾವುದೇ ರಿಯಾಯಿತಿ ಇಲ್ಲದೆ ನೊಂದಣಿಯಾಗದ ಮೀನುಗಾರಿಕಾ ದೋಣಿಯನ್ನು ಅಕ್ರಮ ಎಂದೇ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು.
ಇನ್ನು ಮುಂದೆ ಮೀನುಗಾರಿಕಾ ದೋಣಿಗಳಲ್ಲಿ ಎರಡು ಕೆಟಗರಿ ಮಾತ್ರ ಇರುತ್ತದೆ. 45ಮೀ.ಗಿಂತ ಕೆಳಗಿನ ಹಡಗು ಹಾಗೂ 45 ಮೀ.ಗಿಂತ ಹೆಚ್ಚಿನ ಉದ್ದದ ಹಡಗುಗಳು. ಇವುಗಳಲ್ಲಿ 45 ಮೀ.ಗಿಂತ ಕಡಿಮೆ ಉದ್ದದ ದೋಣಿಗಳಿಗೆ ಈ ನಿಯಮಗಳು ಲಾಗೂ ಆಗುತ್ತವೆ. 45ಮೀ.ಗಿಂತ ಹೆಚ್ಚು ಉದ್ದದ ಹಡಗುಗಳು 2012ರ ಅಂತಾರಾಷ್ಟ್ರೀಯ ಕೇಪ್ ಟೌನ್ ಒಪ್ಪಂದದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಎಲ್ಲರಿಗೂ ಇವುಗಳನ್ನು ಅಳವಡಿಸಿ ಕೊಳ್ಳಲು ಮಾಲಕರಿಗೆ ನಿಗದಿತ ಕಾಲಾವಕಾಶವನ್ನು ನೀಡಲಾಗುತ್ತದೆ ಎಂದು ಅಶಿಶ್ ಕೌಶಿಕ್ ತಿಳಿಸಿದರು.
ಐಡಿ ಕಾರ್ಡ್ ಕಡ್ಡಾಯ: ಇನ್ನು ಮುಂದೆ ಮೀನುಗಾರಿಕೆಗೆ ತೆರಳುವ ಪ್ರತಿಯೊಬ್ಬ ಮೀನುಗಾರರಿಗೂ ಕ್ಯೂಆರ್ ಕೋಡ್ ಇರುವ ಪ್ರತೇಕ ಐಟಿ ಕಾರ್ಡ್‌ನ್ನು ನೀಡಲಾಗುತ್ತದೆ. ಈ ಕಾರ್ಡ್ ಇಲ್ಲದೇ ಯಾರಿಗೂ ಮೀನುಗಾರಿಕೆಗೆ ತೆರಳಲು ಅವಕಾಶವಿಲ್ಲ. ಈ ಕಾರ್ಡ್‌ನಲ್ಲಿ ಆಯಾ ಮೀನುಗಾರರ ಕುರಿತಂತೆ ಸಮಗ್ರ ಮಾಹಿತಿ ಇರುತ್ತದೆ. ಆತನ ಹಿಂದಿನ ಸಮಗ್ರ ವಿವರ ಇದರಲ್ಲಿದ್ದು, ಇದರಿಂದ ಹೊರರಾಜ್ಯದಿಂದ ಇಲ್ಲಿಗೆ ಬರುವ ಮೀನುಗಾರರ ಕುರಿತಂತೆ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದರು.
ಅದೇ ರೀತಿ ಮುಂದಿನ ದಿನಗಳಲ್ಲಿ ಪ್ರತಿಯೊಂದು ಮೀನುಗಾರಿಕಾ ವೆಸೆಲ್ಸ್ (ದೋಣಿ-ಬೋಟ್- ಹಡಗು)ಗೂ ಸಂಬಂಧಿತ ಪೋರ್ಟಲ್‌ಗೆ ಲಿಂಕ್ ಆಗಿರುವ ತಿದ್ದುಪಡಿ ಮಾಡಲು ಸಾಧ್ಯವಾಗದ ವಿಶಿಷ್ಟ ಗುರುತಿನ ಫಲಕ ಮತ್ತು ಕ್ಯೂಆರ್ ಕೋಡ್‌ನ್ನು ಶಾಶ್ವತವಾಗಿ ಅಳವಡಿಸಬೇಕಾಗುತ್ತದೆ ಎಂದರು.
ಜೀವರಕ್ಷಕ ಉಪಕರಣ: ಹಡಗಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಪ್ರತ್ಯೇಕ ಲೈಫ್ ಜಾಕೆಟ್ ಇರಬೇಕಾಗುತ್ತದೆ. 7ಮೀ.ಗಿಂತ ಹೆಚ್ಚಿನ ಉದ್ದದ ಬೋಟ್‌ಗಳಲ್ಲಿ ತುರ್ತು ಸಂಕೇತ ಸಾಧನೆಗಳು ಕಡ್ಡಾಯ, 12ಮೀ.ಗಿಂತ ಹೆಚ್ಚಿನ ಉದ್ದದ ಬೋಟ್‌ಗಳಲ್ಲಿ ಮೆಗ್ನಾಟಿಕ್ ಕಂಪಾಸ್, ಆಳ ಅಳೆಯುವ ಎಕೋ ಸೌಂಡರ್, ಫಿಶ್ ಫೈಂಡರ್, ಜಿಪಿಎಸ್ ವ್ಯವಸ್ಥೆ ಇರಲೇ ಬೇಕು. 35ಮೀ.ಗಿಂತ ಹೆಚ್ಚು ಉದ್ದದ ಹಡಗುಗಳಲ್ಲಿ ಎಕ್ಸ್-ಬ್ಯಾಂಡ್ ರಾಡಾರ್ ಕಡ್ಡಾಯ. ಅದೇ ರೀತಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಮೆಡಿಕಲ್ ಕಿಟ್ ಸಹ ಎಲ್ಲಾ ದೋಣಿಗಳಲ್ಲೂ ಕಡ್ಡಾಯ ಎಂದರು.
ಕಾರ್ಯಕ್ರಮದಲ್ಲಿ ಸಿಫ್‌ನೆಟ್‌ನ ವಿಜ್ಞಾನಿ ಅರುಣ್ ಕೆ., ಜಿಲ್ಲಾ ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳಾದ ಸರಿತಾ ಖಾದ್ರಿ, ಕುಮಾರಸ್ವಾಮಿ, ಅಪರ ನಿರ್ದೇಶಕ ಗಣೇಶ್ ಕೆ., ಕಾರವಾರದ ರವೀಂದ್ರ, ಮಲ್ಪೆ ಮೀನುಗಾರರ ಸಂಘದ ಉಪಾಧ್ಯಕ್ಷ ಕಿಶೋರ್ ಕೆ.ಸುವರ್ಣ ಸೇರಿದಂತೆ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.