ಕುಂದಾಪುರ, ನ.20: ಬೆಂಗಳೂರಿನ ಬಿಡದಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೋಟ ಪಡುಕೆರೆಯ ನಿವಾಸಿ, ಹೋಟೆಲ್ ಉದ್ಯಮಿ ವಿಶ್ವನಾಥ ಎಚ್.(55) ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮಣೂರು-ಪಡುಕೆರೆಯ ಜಟ್ಟಿಗೇಶ್ವರ ದೈವಸ್ಥಾನದ ಸಮೀಪದ ನಿವಾಸಿಯಾಗಿದ್ದ ವಿಶ್ವನಾಥ ಅವರು ನರಸಿಂಹ ಮೊಗವೀರ ಅವರ ಪುತ್ರ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸುಮಾರು 33 ವರ್ಷಗಳ ಹಿಂದೆ ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದ ಅವರು, ಬಳಿಕ ಬೆಂಗಳೂರಿಗೆ ತೆರಳಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಬಿಡದಿಯಲ್ಲಿ ’ಕರಾವಳಿ ಕಿಚನ್’ ಹೆಸರಿನ ಹೋಟೆಲ್ ನಡೆಸುತ್ತಿದ್ದರು.

ಗುರುವಾರ ರಾತ್ರಿ ವಿಶ್ವನಾಥ್ ಎಚ್. ಹೋಟೆಲಿನ ದೈನಂದಿನ ವ್ಯವಹಾರ ಮುಗಿಸಿ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಿಶ್ವನಾಥ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಬೆಳಿಗ್ಗೆ ಮಣೂರು- ಪಡುಕೆರೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor