ಕೊನೆಗೂ ರದ್ದಾಯಿತು ಆ.1ರ ಮಳೆ ನಡಿಗೆ ‘ಕಬ್ಬಿನಾಲೆ ರೈನಥಾನ್’
ಉಡುಪಿ, ಜು.31: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಬ್ಬಿನಾಲೆಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬೆಂಗಳೂರಿನ ಖಾಸಗಿ ಸಂಘಟನೆಯೊಂದು ಆಗಸ್ಟ್ 1ರಂದು ಆಯೋಜಿಸಿದ್ದ ‘ಕಬ್ಬಿನಾಲೆ ರೈನಥಾನ್’ ಕಾಡಿನ ನಡುವೆ ಮಳೆಯಲ್ಲಿ ನಡಿಗೆ ಕೊನೆಗೂ ರದ್ದಾಗಿದೆ. ಕುದುರೆಮುಖ ವನ್ಯಜೀವಿ ವಿಭಾಗ, ಅರಣ್ಯ ಇಲಾಖೆ ಯಿಂದ ಅನುಮತಿ ದೊರೆಯದ ಕಾರಣಕ್ಕಾಗಿ ಸಂಘಟಕರು ನಾಳಿನ ಕಾರ್ಯಕ್ರಮವನ್ನು ಮುಂದೂಡಿದ್ದಾರೆ ಎಂದು ಹೆಬ್ರಿ ಪೊಲೀಸರು ತಿಳಿಸಿದ್ದಾರೆ.
ನಾಡಿನ ಪರಿಸರ ಹೋರಾಟಗಾರರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ದಟ್ಟ ಮಳೆಕಾಡು ನಡುವೆ ಆಯೋಜಿಸಿದ್ದ ಈ ಕಾರ್ಯಕ್ರಮ ವಿವಾದಕ್ಕೆ ಸಿಲುಕಿದ್ದು, ಇದರಿಂದ ಯಾವ ಇಲಾಖೆಯಿಂದಲೂ ಪರವಾನಿಗೆ ಯನ್ನು ಪಡೆಯದೇ ಮಳೆ ನಡಿಗೆಯನ್ನು ಘೋಷಿಸಿದ್ದ ಸಂಘಟಕರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು. ಮುಂದಿನ ದಿನಗಳಲ್ಲಿ ‘ಎಲ್ಲರ ಪರವಾನಿಗೆ’ ಪಡೆದು ಮತ್ತೆ ಕಾರ್ಯಕ್ರಮವನ್ನು ನಡೆಸುವುದಾಗಿ ಸಂಘಟಕರು ತಿಳಿಸಿದ್ದಾರೆ ಎಂದೂ ಪೊಲೀಸ್ ಮೂಲಗಳು ತಿಳಿಸಿದೆ.
ದಟ್ಟ ಮಳೆಕಾಡು, ಅನೇಕ ಜಲಪಾತ, ಹೊಳೆ, ಅಪರೂಪದ ಜೀವವೈವಿಧ್ಯತೆಯನ್ನು ಹೊಂದಿರುವ ಸೋಮೇಶ್ವರ ವನ್ಯಜೀವಿ ಧಾಮ ದೊಳಗೆ ಬರುವ ಕಬ್ಬಿನಾಲೆ ಪ್ರದೇಶದಲ್ಲಿ ನೂರಾರು ಮಂದಿ ಸೇರಿ ನಡೆಸುವ ಮಳೆ ನಡಿಗೆ ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ತ್ಯಾಜ್ಯ, ವಾಹನಗಳ ಗದ್ದಲಗಳಿಂದ ವನ್ಯಜೀವಿಗಳಿಗೆ, ಅವುಗಳ ಸಂತಾನೋತ್ಪತ್ತಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಪರಿಸರ ಹೋರಾಟಗಾರರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ವನ್ಯಜೀವಿ ವಿಭಾಗ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗ್ರಾಪಂಗೆ ದೂರು ಸಲ್ಲಿಸಿ ಇದಕ್ಕೆ ಅನುಮತಿ ನೀಡದಂತೆ ಒತ್ತಾಯಿಸಿದ್ದರು.
ಫ್ರಾಗ್‌ವಾಕ್, ಹರ್ಪಿಂಗ್‌ಗೆ ನಿಷೇಧ: ಇದರೊಂದಿಗೆ ಅರಣ್ಯ ಇಲಾಖೆ ಪಶ್ಚಿಮ ಘಟ್ಟ ಪ್ರದೇಶ, ಆಗುಂಬೆ ಸುತ್ತಮುತ್ತ ಕಾಡಿನಲ್ಲಿ ನಡೆಯುತಿದ್ದ ಇನ್ನಷ್ಟು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ರಾತ್ರಿ ಹೊತ್ತಿನಲ್ಲಿ ಕಾಡಿನಲ್ಲಿ ಕಪ್ಪೆ, ಹಾವು ತೋರಿಸುವ ಜಾಹಿರಾತು ಪ್ರದರ್ಶಿಸಿ ಬೆಂಗಳೂರು ಸೇರಿದಂತೆ ನಾಡಿನ ವಿವಿದೆಡೆಯ ಜನರನ್ನು ಆಕರ್ಷಿಸುತಿದ್ದವರ ವಿರುದ್ಧ ಅದು ಕ್ರಮದ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಪಶ್ಚಿಮ ಘಟ್ಟದ ಅಲ್ಲಲ್ಲಿ ಬ್ಯಾನರ್‌ಗಳನ್ನು ಅಳವಡಿಸಿರುವ ಅರಣ್ಯ ಇಲಾಖೆ, ಅಕ್ರಮ ಅರಣ್ಯ ಪ್ರವೇಶದ ವಿರುದ್ಧ ಎಚ್ಚರಿಕೆ ನೀಡಿದೆ. ಮಾನ್ಸೂನ್ ವಾರಂತ್ಯಗಳಲ್ಲಿ ಹರ್ಪಿಂಗ್, ನೈಟ್‌ಟ್ರಾವೆಲ್ಸ್, ಫ್ರಾಗ್‌ವಾಕ್, ಮ್ಯಾಕ್ರೋ ಫೋಟೋಗ್ರಾಫಿ ಮೊದಲಾದ ಅನಧಿಕೃತ ಕಾರ್ಯಗಾರಗಳನ್ನು ಸೋಮೇಶ್ವರ ವನ್ಯಜೀವಿ ವಲಯಗಳಲಿ,್ಲ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಆಯೋಜಿಸಿ ವನ್ಯಜೀವಿಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದವರಿಗೆ ಅರಣ್ಯ ಇಲಾಖೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಸೋಮೇಶ್ವರ ವನ್ಯಜೀವಿ ಅರಣ್ಯ ವಲಯದ ಈ ಕ್ರಮವನ್ನು ಪರಿಸರಾಸಕ್ತರು, ಹೋರಾಟಗಾರರು ತುಂಬು ಹೃದಯ ದಿಂದ ಸ್ವಾಗತಿಸಿದ್ದಾರೆ. ಇದನ್ನು ಎಲ್ಲಾ ಕಡೆಗಳಲ್ಲೂ ಜಾರಿಗೊಳಿಸಬೇಕಿದೆ. ಕಾಡಿನೊಳಗೆ ನಡೆಯುವ ಎಲ್ಲಾ ಅನಧಿಕೃತ ಚಟುವಟಿಕೆಗಳನ್ನು ನಿಲ್ಲಿಸಲು ಇಲಾಖೆ ಮುತುವರ್ಜಿ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅನಧಿಕೃತವಾಗಿ ವನ್ಯಜೀವಿ ವಲಯದ ವ್ಯಾಪ್ತಿಯೊಳಗೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ. ಒಂದು ವೇಳೆ ನಿಯಮ ಮೀರಿ ಪ್ರವೇಶಿಸಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ. ಕಾಡು ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮೇಶ್ವರ ವನ್ಯಜೀವಿ ಧಾಮದಲ್ಲಿ ಹರ್ಫಿಂಗ್ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಿಷೇಧಿಸಿರುವುದು ಸ್ವಾಗತಾರ್ಹ ಕ್ರಮ. ಈ ಬಗ್ಗೆ ನಾವೇ ದೂರು ನೀಡಿದ್ದೆವು. ಇದನ್ನು ರಾಜ್ಯಾದ್ಯಂತ ವಿಸ್ತರಿಸಬೇಕು. ಈ ನಿಷೇಧವನ್ನು ಉಳಿದ ಅರಣ್ಯಗಳು ಮತ್ತು ಖಾಸಗಿ ಜಾಗಕ್ಕೂ ಅರಣ್ಯ ಇಲಾಖೆ ವಿಸ್ತರಿಸ ಬೇಕು. ರೆಸಾರ್ಟ್, ಹೋಂಸ್ಟೇಗಳು ಖಾಸಗಿ ಜಮೀನುಗಳಲ್ಲಿ ಇರಬಹುದು. ಆದರೆ ಅಲ್ಲಿನ ಕಪ್ಪೆ, ಜೇಡ, ಹಾವು ಇತ್ಯಾದಿ ವನ್ಯಜೀವಿಗಳು ಭಾರತ ಸರ್ಕಾರದ ಆಸ್ತಿ. ಅಲ್ಲದೇ ಅವರು ಇದಕ್ಕಾಗಿ ಅರಣ್ಯ ಪ್ರದೇಶಕ್ಕೆ ಹೋಗಬೇಕಲ್ಲವೇ? ಹಣ ಮಾಡಲು, ಮನರಂಜನೆಗಾಗಿ ವನ್ಯಜೀವಿಗಳ ಶೋಷಣೆ ನಡೆಸಲು ಅವರಿಗೆ ಯಾವುದೇ ಹಕ್ಕಿಲ್ಲ.
-ನಾಗರಾಜ ಕೂವೆ, ಪರಿಸರ ಹೋರಾಟಗಾರ.