ರಾಹುಲ್ ಗಾಂಧಿ ವಿರುದ್ಧ ದ್ವೇಷ ಭಾಷಣ ಪ್ರಕರಣ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಪೊಲೀಸ್ ಠಾಣೆಗೆ ಹಾಜರು
ಉಡುಪಿ: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಇಂದು ರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಮಂಗಳವಾರ ಉಡುಪಿ ನಗರದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ರಾಹುಲ್ ಗಾಂಧಿ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಬುಧವಾರ ಉಡುಪಿ ನಗರ ಪೊಲೀಸರು ಶಾಸಕರ ನಿವಾಸಕ್ಕೆ ತೆರಳಿ ನೋಟಿಸು ನೀಡಿದ್ದರು. ಅದರಂತೆ ಶಾಸಕ ಯಶ್ ಪಾಲ್ ಸುವರ್ಣ ನಗರ ಠಾಣೆಗೆ ಹಾಜರಾಗಿದ್ದು ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಸಕರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು ಅದಕ್ಕೆ ಅವರು ಉತ್ತರಿಸಿದ್ದಾರೆ ಎನ್ನಲಾಗಿದೆ. ರಾತ್ರಿ 8.25ಕ್ಕೆ ಠಾಣೆಗೆ ಆಗಮಿಸಿದ ಅವರು ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿದ್ದು ರಾತ್ರಿ 9:30ರ ಸುಮಾರಿಗೆ ಠಾಣೆಯಿಂದ ವಾಪಸ್ ತೆರಳಿದ್ದಾರೆ ಎಂದು ತಿಳಿದುಬಂದಿದೆ.
"ಪೊಲೀಸ್ ನೋಟೀಸ್‌ಗೆ ಪ್ರತಿಕ್ರಿಯೆಯಾಗಿ ಶಾಸಕ ಯಶ್ ಪಾಲ್ ಸುವರ್ಣ ತನಿಖಾಧಿಕಾರಿಯ ಮುಂದೆ ಹಾಜರಾಗಿದ್ದು, ತನಿಖಾಧಿಕಾರಿಯವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಶಾಸಕರು ನೀಡಿರುವ ಉತ್ತರಗಳ ಆಧಾರದ ಮೇಲೆ ಮುಂದಿನ ತನಿಖೆ ಮುಂದುವರಿಯಲಿದೆ'
- ಹರಿರಾಮ್ ಶಂಕರ್, ಉಡುಪಿ ಎಸ್ಪಿ