ಮೀನುಗಾರಿಕೆಗೆ ತೆರಳಲು ಸಿದ್ಧಗೊಂಡು ನಿಂತಿರುವ ಆಳಸಮುದ್ರ ಬೋಟುಗಳು; ಕುಸಿದು ಬಿದ್ದಿರುವ ಗಂಗೊಳ್ಳಿ ಬಂದರಿನ ಜಟ್ಟಿ
► 2 ತಿಂಗಳ ‘ರಜೆ’ ಬಳಿಕ ಯಾಂತ್ರೀಕೃತ ಮೀನುಗಾರಿಕೆಗೆ ಸಜ್ಜಾದ ‘ಕಡಲ ಮಕ್ಕಳು’ ► ಬಗೆಹರಿಯದ ಸಮಸ್ಯೆಗಳ ನಡುವೆ ಮೀನುಗಾರಿಕೆಗೆ ಅಧಿಕೃತ ಆರಂಭ
ಕುಂದಾಪುರ, ಜು.31: ಎರಡು ತಿಂಗಳ ಮೀನುಗಾರಿಕಾ ನಿರ್ಬಂಧದ ಬಳಿಕ ಯಾಂತ್ರೀಕೃತ ಮೀನುಗಾರಿಕೆ ಶನಿವಾರ ಆಗಸ್ಟ್ ಒಂದರಿಂದ ಅಧಿಕೃತವಾಗಿ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ ಸಾವಿರಾರು ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕೆ ಇಳಿಯಲು ಸಜ್ಜಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಕಳೆದ ಸುಮಾರು 15 ದಿನಗಳಿಂದ ಜಿಲ್ಲೆಯ ಬಂದರುಗಳಲ್ಲಿ, ಮೀನುಗಾರಿಕಾ ಜಟ್ಟಿಗಳಲ್ಲಿ ಕಡಲ ಮಕ್ಕಳು ಹೊಸ ಮೀನುಗಾರಿಕಾ ಋತು ಪ್ರಾರಂಭಕ್ಕೆ ಬೇಕಾದ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೋಟ್‌ಗಳ ರಿಪೇರಿ, ಹರಿದ ಬಲೆಗಳಿಗೆ ಹೊಲಿಗೆ, ಬೋಟ್‌ಗಳಿಗೆ ಬಲೆಗಳನ್ನು ಅಳವಡಿಸುವುದು, ಎಂಜಿನ್ ದುರಸ್ತಿ, ಬಲೆ ಎಳೆಯುವ ಹಗ್ಗಗಳ ದುರಸ್ತಿ, ಪೈಂಟಿಂಗ್ ಕಾರ್ಯಗಳು ಬಹುತೇಕ ಮುಗಿದು ಆಳಸಮುದ್ರ ಮೀನುಗಾರಿಕಾ ಬೋಟುಗಳು ಇದೀಗ ಮೀನುಗಾರಿಕೆ ನಡೆಸಲು ಅಲಂಕರಿಸಿಕೊಂಡು ನಿಂತಿವೆ.
ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆಗೆ ತೆರಳಲು ಸಿದ್ಧರಾದ ಮೀನುಗಾರರ ಉತ್ಸಾಹವನ್ನು ಕಾಣಬಹುದಿತ್ತು. ಇದೇ ರೀತಿಯ ಚಿತ್ರಣ ಮಲ್ಪೆ ಸೇರಿದಂತೆ ಜಿಲ್ಲೆಯ ಇತರ ಬಂದರುಗಳಲ್ಲೂ ಕಂಡುಬಂದಿವೆ.
ಮಳೆಗಾಲದ ಮೀನುಗಾರಿಕಾ ರಜೆಯ ಬಳಿಕ ಮತ್ತೆ ಮೀನುಗಾರಿಕಾ ಚಟುವಟಿಕೆಗಳು ಜಿಲ್ಲೆಯಲ್ಲಿ ಆರಂಭಗೊಳ್ಳು ತ್ತಿವೆ. ವಿಶ್ರಾಂತಿಯಲ್ಲಿದ್ದ ಬೋಟುಗಳನ್ನು ಕಡಲಿಗೆ ಇಳಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಎರಡು ತಿಂಗಳ ರಜೆಯ ಬಳಿಕ ಮತ್ತೆ ಕಡಲಿಗಿಳಿಯಲು ಆಳಸಮುದ್ರ ಮೀನುಗಾರರು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಆ.1ರಿಂದ ಆಳಸಮುದ್ರ ಬೋಟ್‌ಗಳು ಹಂತಹಂತವಾಗಿ ಮೀನುಗಾರಿಕೆಗೆ ತೆರಳಲಿವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಈ ಬಾರಿ ಮಳೆ ಕೊರತೆ, ಹವಾಮಾನ ವೈಪರೀತ್ಯದಿಂದಾಗಿ ಮಳೆಗಾಲದ ನಾಡದೋಣಿ ಮೀನುಗಾರಿಕೆ ಸಮರ್ಪಕ ನಡೆದಿರಲಿಲ್ಲ. ಮತ್ಸ್ಯಕ್ಷಾಮ ತಲೆದೋರಿದ್ದರಿಂದ ಬಹುತೇಕ ನಾಡದೋಣಿಗಳು ಜು.15ರ ನಂತರ ಸಮುದ್ರಕ್ಕಿಳಿದಿ ದ್ದವು. ಹವಾಮಾನ ವೈಪರೀತ್ಯ, ಮತ್ಸ್ಯ ಕ್ಷಾಮದಿಂದ ಕಳೆದ ಸಾಲಿನಲ್ಲಿ ಕಂಗೆಟ್ಟು ಹೋಗಿದ್ದ ಮೀನುಗಾರರು ಈ ಬಾರಿ ಹೊಸ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯಲು ಸಿದ್ಧತೆ ಆರಂಭಿಸಿದ್ದಾರೆ.
ಮುಗಿಯದ ಕಾಮಗಾರಿ: ಗಂಗೊಳ್ಳಿ ಬಂದರಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಗಂಗೊಳ್ಳಿ ಬಂದರಿನಲ್ಲಿ ಮೀನು ಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಇಲ್ಲಿನ ಅಳಿವೆಯಲ್ಲಿ ಇನ್ನೂ ಹೂಳೆತ್ತಿಲ್ಲ. ಅರ್ಧಕ್ಕೆ ನಿಂತ ಜೆಟ್ಟಿ ಪುನರ್‌ನಿರ್ಮಾಣ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ.
ಗಂಗೊಳ್ಳಿ ಬಂದರಿನಲ್ಲಿ ಸುಮಾರು 100ಕ್ಕೂ ಅಧಿಕ ಫಿಶಿಂಗ್ ಬೋಟ್ ಸೇರಿದಂತೆ 400ಕ್ಕೂ ಅಧಿಕ ಬೋಟುಗಳು ಹಾಗೂ 25ಕ್ಕೂ ಅಧಿಕ ಆಳ ಸಮುದ್ರ ಬೋಟುಗಳು ಕಾರ್ಯಚರಿಸುತ್ತವೆ. ಇಲ್ಲಿ 12 ಕೋಟಿ ರೂ ವೆಚ್ಚದಲ್ಲಿ ಜೆಟ್ಟಿ ಪುನರ್‌ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ಈವರೆಗೆ ಸಮರ್ಪಕ ವಾಗಿ ನಡೆಯದಿರುವುದರಿಂದ ಅಳಿವೆಯಲ್ಲಿ ಹೂಳು ತುಂಬಿಕೊಂಡಿದ್ದು, ದೋಣಿ ಹಾಗೂ ಬೋಟುಗಳು ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ.
ಮಾಸಿಲ್ಲ ದೋಣಿ ದುರಂತದ ನೆನಪು: ಕಳೆದ ವರ್ಷ ಜು.15ರಂದು ಗಂಗೊಳ್ಳಿ ಅಳಿವೆಯಲ್ಲಿ ನಡೆದ ದೋಣಿ ದುರಂತ ದಲ್ಲಿ ಮೂವರು ಮೀನುಗಾರರು ಸಾವನ್ನಪ್ಪಿರುವ ಘಟನೆ ಜನಮಾನಸದಲ್ಲಿ ಇನ್ನೂ ಹಸಿರಾಗಿಯೇ ಇದೆ. ಮೀನುಗಾರರ ಪಾಲಿನ ಮೃತ್ಯಕೂಪವಾಗಿರುವ ಗಂಗೊಳ್ಳಿ ಅಳಿವೆ ಸಮಸ್ಯೆ ಆರಂಭದಲ್ಲೇ ಮೀನುಗಾರರನ್ನು ಬಲಿ ತೆಗೆದುಕೊಂಡಿತ್ತು. ಹೀಗಾಗಿ ಬ್ರೇಕ್‌ವಾಟರ್ ವಿಸ್ತರಣೆ ಮಾಡಬೇಕೆಂಬ ಕೂಗು ಮೀನುಗಾರ ವಲಯದಿಂದ ಕೇಳಿ ಬಂದಿದೆ.
‘ಬಂದರಿನಲ್ಲಿ ಜೆಟ್ಟಿ ಕುಸಿತದ ಬಳಿಕ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಹೀಗಾಗಿ ಮೀನು ಇಳಿಸಲು, ಸಾಗಾಟ ಮಾಡಲು ಜೆಟ್ಟಿ ಪ್ರದೇಶದಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲ. ಜೆಟ್ಟಿ ಮತ್ತು ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಬೇಡಿಕೆಗೆ ಇನ್ನೂ ಸ್ಪಂದನೆ ದೊರಕಿಲ್ಲ. ಬಂದರಿನ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆಗೆ ಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸಿ, ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ಹೊರ ರಾಜ್ಯದ ಕಾರ್ಮಿಕರ ಕೊರತೆ ಅಥವಾ ಸಬ್ಸಿಡಿ ದರದ ಡೀಸೆಲ್ ಪರವಾನಗಿ ಪಡೆಯುವಲ್ಲಿಯೂ ಸಮಸ್ಯೆಗಳಿದೆʼ.
-ರಾಮಪ್ಪ ಖಾರ್ವಿ ಗಂಗೊಳ್ಳಿ, ಮೀನುಗಾರ ಮುಖಂಡರು.
ಕಡಲ ಮಕ್ಕಳಿಗೆ ಬೇಕಿದೆ ಸರಕಾರದ ಸ್ಪಂದನೆ
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿರುವ ಎಲ್ಲಾ ಸಮಸ್ಯೆಗಳನ್ನು ನಡುವೆ ಈ ಮೀನುಗಾರಿಕಾ ಋತುವಿನಲ್ಲಿ ಹೊಸ ಭರವಸೆಗಳೊಂದಿಗೆ ಕಡಲ ಮಕ್ಕಳು ಮೀನುಗಾರಿಕೆಗೆ ಸಿದ್ಧರಾಗಿದ್ದು, ಮೀನುಗಾರರ ಬೇಡಿಕೆ ಈಡೇರಿಸಲು ಆಡಳಿತ ವರ್ಗ ಮುಂದಾಗಬೇಕಿದೆ. ಮೀನುಗಾರಿಕೆಗೆ ಉತ್ತೇಜನ ನೀಡುವ ಮತ್ತು ಮೀನುಗಾರರಿಗೆ ಬೆಂಬಲ ನೀಡುವ ಯೋಜನೆ ಸರಕಾರಗಳ ಮೂಲಕ ನಡೆಯಬೇಕಿದೆ. ಸರಕಾರ ಮೀನುಗಾರರ ಬೇಡಿಕೆಗೆ ಸ್ಪಂದಿಸಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಉತ್ತಮವಾದ ಯೋಜನೆ ರೂಪಿಸಬೇಕು ಎಂಬುದು ಸ್ಥಳೀಯ ಮೀನುಗಾರರ ಒಕ್ಕೊಲರ ಆಗ್ರಹ.