ಉಡುಪಿ: ಅ.21ಕ್ಕೆ ಪುತ್ತಿಗೆ ಮಠದಿಂದ ಮಧ್ವಜಯಂತಿ ಉತ್ಸವ
ಉಡುಪಿ, ಅ.9: ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥರ ಸಂಕಲ್ಪದಂತೆ ಈ ಬಾರಿಯ ಮಧ್ವ ಜಯಂತಿ ಉತ್ಸವವನ್ನು ಅ.21ರಂದು ಉಡುಪಿಯ ರಾಜಾಂಗಣದ ಬಳಿ ಇರುವ ಗೀತಾಮಂದಿರದ ಪುತ್ತಿಗೆ ಶ್ರೀ ನರಸಿಂಹ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಮುರಳಿ ಕೆ.ತಂತ್ರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುರಳಿ ತಂತ್ರಿ, ಕಾರ್ಯಕ್ರಮ ಅಂದು ಸಂಜೆ 4ಗಂಟೆಗೆ ಪ್ರಾರಂಭಗೊಳ್ಳ ಲಿದ್ದು, ಮೊದಲು ವಿದುಷಿ ಡಾ.ಉಷಾ ಹೆಬ್ಬಾರ್ ಮತ್ತು ಬಳಗದಿಂದ ಭಜನೆ ನಡೆಯಲಿದೆ ಎಂದರು.
ಸಂಜೆ 4:45ರಿಂದ ‘ಆಧುನಿಕ ಜೀವನದಲ್ಲಿ ಮಧ್ವ ಸಿದ್ಧಾಂತದ ಪ್ರಸ್ತುತತೆ-ಜೀವ ಸ್ವಭಾವ’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಇದರಲ್ಲಿ ಆಚಾರ್ಯರ ತತ್ವಗಳಲ್ಲಿ ಮುಖ್ಯವಾದ ಜೀವಸ್ವಭಾವದ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ.ವಿದ್ವಾನ್ ಹೆರ್ಗ ರವೀಂದ್ರ ಭಟ್, ಟಿಸಿಎಸ್‌ನ ನಿರ್ದೇಶಕ, ಚಿಂತಕ ಹಾಗೂ ಖ್ಯಾತ ಕಲಾವಿದ ಶೇಷಗಿರಿ ಕೆ.ಎಂ. ಮತ್ತು ಮನಶಾಸ್ತ್ರಜ್ಞ ಡಾ.ಸುದರ್ಶನ್ ವಿಚಾರಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಬಳಿಕ ಸಂಜೆ 6:15ರಿಂದ ವಿದ್ವಾನ್ ಕೃಷ್ಣರಾಜ ಭಟ್ ಕುತ್ಪಾಡಿ ಹಾಗೂ ದಿವ್ಯಾ ಗಿರಿಧರ್ ಮತ್ತು ಬಳಗದಿಂದ ಗಾನಲಹರಿ, ವಾಚನ ನಡೆಯಲಿದೆ ಎಂದೂ ಮುರಳಿ ಕೆ.ತಂತ್ರಿ ತಿಳಿಸಿದರು. ಗೀತಾಮಂದಿರದ ಪ್ರಭಾರಿ ಕೆ.ವಿ. ರಮಣಾಚಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.