ಕಾರಂತರ ಯಕ್ಷ ಪ್ರಯೋಗ ಅವರ ಕಲಾವಿದರಿಗೇ ಅರ್ಥವಾಗಿರಲಿಲ್ಲ: ಬಿ.ಆರ್.ವೆಂಕಟರಮಣ ಐತಾಳ್
ಉಡುಪಿಯಲ್ಲಿ ಕಾರಂತರ 124ನೇ ಜನ್ಮ ದಿನಾಚರಣೆ
ಉಡುಪಿ, ಅ.9: ಯಕ್ಷಗಾನದ ಸವ್ಯಸಾಚಿ ಕೆರೆಮನೆ ಮಹಾಬಲ ಹೆಗಡೆ ಹಾಗೂ ಭಾಗವತ ನೀಲಾವರ ರಾಮಕೃಷ್ಣ ಯ್ಯರನ್ನು ಹೊರತು ಪಡಿಸಿ ಅವರ ತಂಡದ ಉಳಿದ ಕಲಾವಿದರಿಗೇ ಡಾ.ಶಿವರಾಮ ಕಾರಂತರು ಯಕ್ಷಗಾನ ಬ್ಯಾಲೆ ಮೂಲಕ ನಡೆಸಿದ ಪ್ರಯೋಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯ ವಾಗಿರಲಿಲ್ಲ. ಹೀಗಾಗಿ ಅವರ ಹೊಸ ಪ್ರಯೋಗ ಯಶಸ್ಸು ಕಾಣಲಿಲ್ಲ ಎಂದು ಕಾರ್ಕಳದ ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ಶುಕ್ರವಾರ ನಡೆದ ಕಾರಂತರ 124ನೇ ಜನ್ಮದಿನಾಚರಣೆ ಮತ್ತು ಕಾರಂತರ ನೆನಪಿನಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಡಾ.ಶಿವರಾಮ ಕಾರಂತರು ನನಗೆ ಪರಮ ಗುರುಗಳಿದ್ದಂತೆ. ಉಡುಪಿಯ ಯಕ್ಷಗಾನ ಕೇಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ನಾನು ಅವರಿಂದ ತರಬೇತಿ ಪಡೆದಿದ್ದೇನೆ, ಅವರ ಒಡನಾಟದಲ್ಲಿದ್ದೆ. ರವೀಂದ್ರನಾಥ ಠಾಗೂರರಂತೆ ಕಾರಂತರು ಸಹ ಯಕ್ಷಗಾನದ ಮೂಲಕ ಆಧುನಿಕ ರಂಗಭೂಮಿಯ ಪ್ರಯೋಗಗಳನ್ನು ನಡೆಸಿದ್ದರು ಎಂದರು.
ಅಂದಿನ ಕಾಲದಲ್ಲಿ ಯಕ್ಷಗಾನದಂಥ ಸಾಂಪ್ರದಾಯಿಕ ಕಲೆಯಲ್ಲಿ ಕಾರಂತರು ಮಾಡಿದ ಪ್ರಯೋಗಗಳನ್ನು ಜನರು ಸ್ವೀಕರಿಸಲು ಸಿದ್ಧರಿರಲಿಲ್ಲ. ಇದರಿಂದಾಗಿಯೇ ಕಾರಂತರು ತಮ್ಮ ಪ್ರಯೋಗಗಳಿಗೆ ವೃತ್ತಿಪರ ಕಲಾವಿ ದರನ್ನು ಬಳಸಿಕೊಂಡರು. ಆದರೆ ಮಹಾಬಲ ಹೆಗಡೆ, ರಾಮಕೃಷ್ಣಯ್ಯರಂಥ ಒಬ್ಬಿಬ್ಬರನ್ನು ಹೊರತು ಪಡಿಸಿ ಉಳಿದ ಯಾವುದೇ ಕಲಾವಿದರಿಗೆ ಅವರು ಯಕ್ಷಗಾನ ಬ್ಯಾಲೆ ಮೂಲಕ ನಡೆಸಿದ ಪ್ರಯೋಗವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.
ಕಾರಂತರು ಕನ್ನಡದ ಮೂಲ ಚಿಂತಕರಲ್ಲಿ ಒಬ್ಬರು. ಸುಮಾರು ಎಂಟು ದಶಕಗಳ ಹಿಂದೆ ಅವರು ಬರೆದ ‘ಬಾಳ್ವೆಯೇ ಬೆಳಕು’ ಕೃತಿಯನ್ನು ಕಾರಂತೋಪನಿಷತ್ತು ಎನ್ನಬಹುದು. ಅದು ಅವರ ಚಿಂತನೆಯ ಮೂಸೆಯಲ್ಲಿ ಮೂಡಿಬಂದ ಅಪೂರ್ವ ಮಾರ್ಗದರ್ಶಕ ಕೃತಿಯಾಗಿದೆ ಎಂದು ವೆಂಕಟರಮಣ ಐತಾಳ್ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಜಾನಪದ ವಿದ್ವಾಂಸ ಹಾಗೂ ಚಿಂತಕ ಡಾ.ಗಣೇಶ ಅಮೀನ್ ಸಂಕಮಾರ್ ಮಾತನಾಡಿ, ಕಾರಂತರು ಕನ್ನಡದಲ್ಲಿ ಬರೆಯದೇ ಹೋಗಿದ್ದರೆ, ಕನ್ನಡಕ್ಕೆ ಇಂಥ ಗೌರವ, ಮಾನ್ಯತೆ ಸಿಗುತ್ತಿರಲಿಲ್ಲ. ಅಷ್ಟೊಂದು ವೈವಿಧ್ಯತೆ ಅವರ ಬರಹದಲ್ಲಿತ್ತು ಎಂದರು.
ಕಾರಂತರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಪ್ರತಿಯೊಂದು ವಿಚಾರ ವನ್ನು ವೈಜ್ಞಾನಿಕವಾಗಿ ಹಾಗೂ ವೈಚಾರಿಕ ವಾಗಿ ನೋಡುವ ದೃಷ್ಟಿಕೋನ ಅವರದು. ಆದ್ದರಿಂದ ಅವರನ್ನು ಕಳೆದ ಶತಮಾನದ ಸಾಹಿತ್ಯ ವಿಜ್ಞಾನಿ ಎಂದು ಕರೆಯಬಹುದು ಎಂದು ಬಣ್ಣಿಸಿದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಸಂಕಯ್ಯ ಶೆಟ್ಟಿ ಅವರು ಯಕ್ಷಗಾನ ಕೇಂದ್ರದ ಮೂಲಕ ಪ್ರಾರಂಭಗೊಂಡ ಕಾರಂತ ರೊಂದಿಗಿನ ತಮ್ಮ ಒಡನಾಟವನ್ನು ರಸವತ್ತಾಗಿ ಬಣ್ಣಿಸಿದರು. ಕಾರಂತರು ಕೋಪಿಷ್ಠರು ಎಂದು ಬಹಳಷ್ಟು ಮಂದಿ ತಪ್ಪು ತಿಳಿದಿದ್ದಾರೆ. ಅವರಲ್ಲಿದ್ದ ಮಗುವಿನ ಮುಗ್ಧತೆ ಹಾಗೂ ತಾಯಿ ಪ್ರೀತಿ ಹೆಚ್ಚಿನವರಿಗೆ ತಿಳಿದಿಲ್ಲ ಎಂದರು.
ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ರೇಡಿಯೋ ಮಣಿಪಾಲದ ಸಂಯೋಜಕಿ ಹಾಗೂ ಸಹಾಯಕ ಪ್ರಾದ್ಯಾಪಕಿ ಡಾ.ರಶ್ಮಿ ಅಮ್ಮೆಂಬಳ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾರಂತರ ಜನ್ಮದಿನಾಚರಣೆಯ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸದಸ್ಯರಾದ ಡಾ.ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರೂಪಿಸಿದರೆ, ಸತೀಶ್ ಕೊಡವೂರು ವಂದಿಸಿದರು.