ಉಡುಪಿ, ಸೆ.12: ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರಿನ ರಥಬೀದಿ ಯಲ್ಲಿರುವ ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳು ನಗರದ ಪೂರ್ಣ ಪ್ರಜ್ಞ ಕಾಲೇಜಿನ ವಜ್ರಮಹೋತ್ಸವದ ಅಂಗವಾಗಿ ಆಯೋಜಿಸ ಲಾದ ಮಂಗಳೂರು ವಿವಿ ಚೆಸ್ ಚಾಂಪಿಯನ್‌ ಶಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ತಂಡ ಪ್ರಶಸ್ತಿಗಳನ್ನು ಗೆದ್ದುಕೊಂಡವು.

ಎರಡು ದಿನಗಳ ಕಾಲ ಕಾಲೇಜಿನಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ ಮಂಗಳೂರು ವಿವಿಗೆ ಸೇರಿದ ಒಟ್ಟು 67 ಕಾಲೇಜುಗಳ 400ಕ್ಕೂ ಅಧಿಕ ವಿದ್ಯಾರ್ಥಿ ಚೆಸ್‌ಪಟುಗಳು ಭಾಗವಹಿಸಿದ್ದರು.

ಪುರುಷರ ವಿಭಾಗದಲ್ಲಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರ.ದ. ಕಾಲೇಜು ಗರಿಷ್ಠ ಅಂಕ ಗಳಿಸುವ ಮೂಲಕ ಅಗ್ರಸ್ಥಾನ ದೊಂದಿಗೆ ಚಾಂಪಿಯನ್ ಪಟ್ಟ ಪಡೆದರೆ, ಪುತ್ತೂರಿನ ವಿವೇಕಾನಂದ ಕಾಲೇಜು (ಸ್ವಾಯತ್ತ) ರನ್ನರ್‌ಅಪ್ ಸ್ಥಾನ ಗೆದ್ದುಕೊಂಡಿತು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ತೃತೀಯ ಹಾಗೂ ಆತಿರ್ಥೇಯ ಪೂರ್ಣಪ್ರಜ್ಞ ಕಾಲೇಜು ಚತುರ್ಥ ಸ್ಥಾನ ಪಡೆದವು.

ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ದಯಾನಂದ ಪೈ- ಪಿ.ಸತೀಶ್ ಪೈ ಸ.ಪ್ರ.ದ ಕಾಲೇಜು ತಂಡ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಟ್ರೋಫಿ ಗೆದ್ದರೆ, ಪುತ್ತೂರಿನ ವಿವೇಕಾನಂದ ಕಾಲೇಜು(ಸ್ವಾಯತ್ತ) ಇಲ್ಲೂ ರನ್ನರ್‌ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಎಸ್.ಡಿ.ಎಂ. ಕಾಲೇಜು (ಸ್ವಾಯತ್ತ) ಉಜಿರೆ ತೃತೀಯ ಹಾಗೂ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರ.ದ ಕಾಲೇಜು ತಂಡ ಚತುರ್ಥ ಸ್ಥಾನವನ್ನು ಗೆದ್ದುಕೊಂಡವು.

ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದಶಿಗಳಾದ ಸಿಎ ಟಿ.ಪ್ರಶಾಂತ್ ಹೊಳ್ಳ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿಶಾಖ್ ಶೆಟ್ಟಿ ಅವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾಂತ ಭಟ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಪ್ರತಿನಿಧಿಗಳಾಗಿ ರವಿಶಂಕರ್, ಪ್ರಸನ್ನ ರಾವ್ ಬಿ. ಉಪಸ್ಥಿತರಿದ್ದರು.

ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕರಾದ ಡಾ.ರಾಘವೇಂದ್ರ ಎಲ್ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಸೂರಜ್ ಮರವಂತೆ ವಂದಿಸಿದರು. ನವ್ಯಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor